ದೊಡ್ಡಬಳ್ಳಾಪುರ, (ಫೆ.17); ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜಕಲ್ಯಾಣ ಇಲಾಖೆ, ನಗರಸಭೆ ವತಿಯಿಂದ ಸಂವಿಧಾನ ಜಾಗೃತಿ ಜಾಥಾ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.
ನಗರದ ಅಂಬೇಡ್ಕರ್ ಪ್ರತಿಮೆ ಮುಂಭಾಗ ಆಗಮಿಸಿದ ರಥಕ್ಕೆ ಗಣ್ಯರು ಸ್ವಾಗತ ಕೋರಿದರು. ನಂತರ, ವಿವಿಧ ಕಲಾತಂಡಗಳೊಡನೆ ನಗರಸಭೆ ಕಾರ್ಯಾಲಯಕ್ಕೆ ಜಾಥಾದ ಮೆರವಣಿಗೆ ನಡೆಯಿತು. ಜಾಥಾದಲ್ಲಿ ಪೂರ್ಣ ಕುಂಭವನ್ನು ಹಿಡಿದ ಮಹಿಳೆಯರು ವಿವಿಧ ಕಲಾತಂಡಗಳೊಡನೆ ಸಂಚರಿಸಿದರು. ಶಾಲಾ ವಿದ್ಯಾರ್ಥಿಗಳು ಸಾರ್ವಜನಿಕರು ಭಾಗವಹಿಸಿದ್ದರು.
ನಗರಸಭಾ ಕಾರ್ಯಾಲಯದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸಂವಿಧಾನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ವಿಶೇಷ ಉಪನ್ಯಾಸ ನೀಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರಕಾಶ್ ಮಂಟೇದ ಭಾರತದ ಸಂವಿಧಾನವು ಬೃಹತ್ ಸಂವಿಧಾನವಾಗಿದ್ದು, ಸಂವಿಧಾನವು ಯಾವುದೇ ಒಂದು ವರ್ಗಕ್ಕೆ ಸೀಮಿತವಾಗದೇ ಎಲ್ಲಾ ವರ್ಗಗಳಿಗೆ ಸಂಬಂಸಿದ ಜಾತ್ಯಾತೀತ ಸಂವಿಧಾನವಾಗಿದೆ.
ದೇಶದ ನಾಗರಿಕರಿಗೆ ಮೂಲಭೂತ ಹಕ್ಕುಗಳನ್ನು ಒದಗಿಸಿದ್ದು, ದೇಶದ ಅಭಿವೃದ್ದಿಯಲ್ಲಿ ಸಂವಿಧಾನದ ಪಾತ್ರ ಮಹತ್ವದ್ದಾಗಿದೆ. ಗಲ್ಪ್ ರಾಷ್ಟ್ರಗಳಲ್ಲಿ ಇತ್ತೀಚೆಗಷ್ಟೇ ಮಹಿಳೆಯರಿಗೆ ವಾಹನ ಚಾಲನೆಗೆ ಅನುಮತಿ ದೊರೆತಿದೆ ಎಂದರೆ ನಮ್ಮ ಸಂವಿಧಾನದ ಮಹತ್ವ ಅರಿವಾಗುತ್ತದೆ. ಸಂವಿಧಾನವಿಲ್ಲದಿದ್ದರೆ ಹಿಂದುಳಿದ ಹಾಗೂ ಶೋಷಿತರ ಬದುಕು ಊಹಿಸಿಕೊಳ್ಳಲೂ ಕಷ್ಟವಾಗುತ್ತಿತ್ತು ಎಂದು ಸಂವಿಧಾನದ ಮಹತ್ವದ ಕುರಿತು ತಿಳಿಸಿದರು.
ತಹಸೀಲ್ದಾರ್ ವಿಭಾ ವಿದ್ಯಾ ರಾಥೋಡ್ ಮಾತನಾಡಿ, ನಮ್ಮ ಸಂವಿಧಾನವು ದೇಶದ ನಾಗರಿಕರಿಗೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಕಾನೂನಾತ್ಮಕವಾಗಿ ಸಮಾನತೆಯನ್ನು ಒದಗಿಸಿದೆ. ಇದರ ಜಾಗೃತಿಗಾಗಿ ಸಂವಿಧಾನ ಜಾಗೃತಿ ರಥ ಜಾಥಾ ಹಮ್ಮಿಕೊಂಡಿದ್ದು, ನಮ್ಮ ತಾಲೂಕಿನಲ್ಲಿ ಶನಿವಾರ ಸಂಚರಿಸಿದ ನಂತ ಬೀಳ್ಕೊಡಲಾಗುವುದು. ಇಂದು ರಾಜ್ಯ ಸರ್ಕಾರದ ಆದೇಶದಂತೆ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರವನ್ನು ಅನಾವರಣಗೊಳಿಸಿ, ಎಲ್ಲಾ ಇಲಾಖೆಗಳಿಗೆ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್, ಪೌರಾಯುಕ್ತ ಕೆ.ಪರಮೇಶ್, ನಗರ ಠಾಣೆ ಇನ್ಸ್ಪೆಕ್ಟರ್ ದಯಾನಂದ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕವಿತಾ ಸೇರಿದಂತೆ ನಗರಸಭಾ ಸದಸ್ಯರು ಸಿಬ್ಬಂದಿ ಹಾಜರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….