ಸರಿ ದಾರಿಗೆ ಬರದಿದ್ದರೆ ಗಡಿಪಾರು; ರೌಡಿ ಶೀಟರ್‌ಗಳಿಗೆ ಇನ್ಸ್‌ಪೆಕ್ಟರ್ ಸಾದಿಕ್‌ ಪಾಷಾ ವಾರ್ನಿಂಗ್

ದೊಡ್ಡಬಳ್ಳಾಪುರ, (ಫೆ.18); ಇತ್ತೀಚೆಗಷ್ಟೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಆಗಿ ಬಂದರುವ ಸಾದಿಕ್ ಪಾಷಾ ಅವರು ರೌಡಿ ಶೀಟರ್‌ಗಳ ಬೆವರು ಸುರಿಯುವಂತೆ ಮಾಡಿದ್ದು, ಅಪರಾಧ ಚಟುವಟಿಕೆಯಿಂದ ದೂರ ಉಳಿಯದಿದ್ದರೆ ಗಡಿಪಾರು ಮಾಡುವ ವಾರ್ನಿಂಗ್ ನೀಡಿದ್ದಾರೆ.

ಇಂದು ಗ್ರಾಮಾಂತರ ಪೊಲೀಸ್ ಠಾಣೆ ಆವರಣದಲ್ಲಿ ರೌಡಿ ಶೀಟರ್ ಗಳ ಪರೇಡ್ ನಡೆಸಿ, ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ರಾಜಕೀಯ ಸಮಾರಂಭಗಳು, ರಾಜಕೀಯ ಮಾಡುವ ವೇಳೆ ಕಾನೂನು ಬಾಹಿರ, ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದು ಕಂಡು ಬಂದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ರೌಡಿಯಿಸಂ, ಗೂಂಡಾಗಿರಿ, ದೌರ್ಜನ್ಯದಿಂದ ಏನೂ ಪ್ರಯೋಜನವಿಲ್ಲ. ನೆಮ್ಮದಿ ಕಳೆದುಕೊಂಡು, ಕುಟಂಬದಿಂದ ದೂರಾಗಿ ಭಯಭೀತಿಯಲ್ಲಿ ಜೀವನ ಮಾಡಬೇಕಷ್ಟೇ. ಅಕ್ರಮ, ಅನೈತಿಕ, ಕಾನೂನು ಬಾಹಿರ ಚಟುವಟಿಕೆಗಳನ್ನು ಸಂಪೂರ್ಣವಾಗಿ ತ್ಯಜಿಸಿ ಉತ್ತಮ ನಾಗರಿಕರಾಗಿ ಜೀವನ ಮಾಡಬೇಕು ಎಂದರು.

ರೌಡಿ ಶೀಟ‌ರ್ ಪಟ್ಟಿಯಿಂದ ನಮ್ಮನ್ನು ತೆಗೆಯಿರಿ ಎಂದು ಕೇಳುವ ಬದಲು.. ನಾವು ಬದಲಾಗಿದ್ದೇವೆ ಎಂದು ನೀವೆ ಪೊಲೀಸ್ ಅಧಿಕಾರಿಗಳನ್ನು ಕೇಳುವಂತಾಗಬೇಕು. ರೌಡಿಯಿಸಂ ಜೀವನವನ್ನು ಹಾಳು ಮಾಡುವುದಲ್ಲದೆ ಜೀವನ ಪರ್ಯಂತ ರೌಡಿಶೀಟರ್ ಪಟ್ಟ ಕಟ್ಟಿಕೊಂಡು ಬದುಕಬೇಕಾಗುತ್ತದೆ. ಆದರೆ ನೆಮ್ಮದಿ ಜೀವನಕ್ಕಾಗಿ ಕೂಲಿ ಕೆಲಸ ಮಾಡಿದರೂ ಪರವಾಗಿಲ್ಲ ಕುಟುಂಬದೊಂದಿಗೆ ಖುಷಿಯಿಂದ ಜೀವನ ಸಾಗಿಸಬಹುದು. 

ರೌಡಿ ಚಟುವಟಿಕೆ, ಕಾನೂನು ಬಾಹಿರ ಕೆಲಸಗಳು ಮುಂದುವರೆದರೆ ಜಿಲ್ಲೆಯಿಂದಲೇ ಗಡಿಪಾರು ಮಾಡಲಾಗುವುದು. ಹತ್ತು, ಇಪ್ಪತ್ತು ವರ್ಷಗಳಾದರೂ ರೌಡಿಶೀಟ‌ರ್ ಪಟ್ಟ ಹೋಗುವುದಿಲ್ಲ. ಕಳ್ಳತನ, ಕೊಲೆ, ದೌರ್ಜನ್ಯ ಮಾಡಿದರೆ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಸಾರ್ವಜನಿಕತು ಕುಟುಂಬದ ಸದಸ್ಯರು ಗೌರವ ನೀಡುವಂತೆ ಜೀವನ ಮಾಡಿ ಎಂದು ಸಲಹೆ ನೀಡಿದರಲ್ಲದೆ, ಜೀವನ ಶೈಲಿ ಬದಲಿಸಿಕೊಂಡರೆ ಎರಡು ತಿಂಗಳಲ್ಲಿ ರೌಡಿ ಶೀಟ‌ರ್ ಪಟ್ಟದಿಂದ ಕೈಬಿಡಲಾಗುವುದು ಎಂದರು.

ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ಸಿಬ್ಬಂದಿಗಳಾದ ರಂಗಸ್ವಾಮಿ, ರಂಗನಾಥ, ಅರ್ಜುನ್ ಲಮಾಣಿ ಮತ್ತಿತರರಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

error: Content is protected !!