ದೊಡ್ಡಬಳ್ಳಾಪುರ, (ಅಗಸ್ಟ್.03); ಮುಡಾ ಹಗರಣ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿ ಮೈತ್ರಿ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಇಂದಿನಿಂದ ಏಳು ದಿನಗಳ ಕಾಲ ಬೆಂಗಳೂರಿನಿಂದ ಮೈಸೂರಿನವರೆಗೆ ಮೈಸೂರು ಚಲೋ ಪಾದಯಾತ್ರೆ ನಡೆಸುತ್ತಿವೆ.
ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ತೆರಳಿದರು.
ದೊಡ್ಡಬಳ್ಳಾಪುರ ನಗರದ ಜೆಡಿಎಸ್ ಕಚೇರಿ ಬಳಿ ಪಾದಯಾತ್ರೆಗೆ ಭಾಗವಹಿಸಲು ತೆರಳಿದ ಕಾರ್ಯಕರ್ತರ 10 ಬಸ್ಸುಗಳಿಗೆ ಬಿ.ಮುನೇಗೌಡ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಮುಡಾ ಮತ್ತು ವಾಲ್ಮೀಕಿ ಹಗರಣ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವುದೇ ನಮ್ಮ ಪಾದಯಾತ್ರೆ ಉದ್ದೇಶ. ರೈತರು ಕೃಷಿ ಚಟುವಟಿಕೆಯಿಂದ ಪಾದಯಾತ್ರೆ ಮುಂದೂಡಲು ಮನವಿ ಮಾಡಲಾಗಿತ್ತು. ಆದರೆ ಬಿಜೆಪಿ ವರಿಷ್ಠರು ಮುಂದೂಡುವುದು ಸರಿಯಲ್ಲ ಅಂತ ಹೇಳಿದ ಕಾರಣ ಪಾದಯಾತ್ರೆಗೆ ಪಕ್ಷದ ವರಿಷ್ಠರು ಒಪ್ಪಿಗೆ ನೀಡಿದ್ದಾರೆ ರಾಜ್ಯದ ಜನರ ಪರವಾಗಿ ಈ ಪಾದಯಾತ್ರೆ ನಡೆಸಲಾಗುತ್ತಿದೆ.
ಇತಿಹಾಸದಲ್ಲೇ ಈ ರೀತಿಯ ಹಗರಣ ಯಾವತ್ತೂ ನಡೆದಿರಲಿಲ್ಲ. ಸ್ವತಃ ಮುಖ್ಯಮಂತ್ರಿಗಳೇ 89ಕೋಟಿ ಹಗರಣ ನಡೆದಿದೆ ಎಂದು ಸದನದಲ್ಲಿ ಒಪ್ಪಿಕೊಂಡಿದ್ದಾರೆ.
ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈ ರೀತಿ ಹಿಂದೆಂದೂ ನಡೆದಿರಲಿಲ್ಲ.ಆಗಾಗಿ ಸರ್ಕಾರವೇ ಇದಕ್ಕೆ ಹೊಣೆ. ಇದರ ವಿರುದ್ಧ ನಮ್ಮ ಹೋರಾಟ ಮಾಡುತ್ತೇವೆ ಎಂದು ಮುನೇಗೌಡ ತಿಳಿಸಿದರು.
ಈ ವೇಳೆ ಜೆಡಿಎಸ್ ತಾಲೂಕು ಅಧ್ಯಕ್ಷ ಲಕ್ಷ್ಮೀಪತಯ್ಯ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮುನಿರಾಮಣ್ಣ, ಮಾಧ್ಯಮ ವಕ್ತಾರ ಕುಂಟನಹಳ್ಳಿ ಮಂಜುನಾಥ್, ಮುಖಂಡರಾದ ನಟರಾಜ್, ಗೋವಿಂದ ರಾಜ್, ಪ್ರಭಾಕರ್, ಶ್ರೀನಿವಾಸ್, ಕೆಂಪೇಗೌಡ , ಮಹಿಳಾ ಘಟಕದ ಪದಾಧಿಕಾರಿಗಳಾದ ಶಶಿಕಲಾ, ಭಾಗ್ಯಮ್ಮ, ಜ್ಯೋತಿ ಮತ್ತಿತರರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

