ದೊಡ್ಡಬಳ್ಳಾಪುರ, (ಆಗಸ್ಟ್.14); ನಾಳೆ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ನಗರಸಭೆ ವ್ಯಾಪ್ತಿಯ ಶಾಲಾ ಮಕ್ಕಳಿಗೆ ಸಿಹಿ ಹಂಚುವಿಕೆಯಲ್ಲಿ ಉಂಟಾಗಿದ್ದ ಲೋಪವನ್ನು ಸರಿ ಪಡಿಸಲು ನಗರಸಭೆ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.
ಸ್ವಾತಂತ್ರ್ಯ ದಿನದಂದು ಶಾಲಾ ಮಕ್ಕಳಿಗೆ ಸಿಹಿ ಹಂಚುವ ಪ್ರಕ್ರಿಯೆಯಲ್ಲಿ ಇದೇ ಮೊದಲ ಬಾರಿಗೆ ಖಾಸಗಿ ಶಾಲೆ ಮಕ್ಕಳನ್ನು ಹೊರಗಿಟ್ಟಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಪ್ರತಿ ವರ್ಷ ಶಾಲಾ ಮಕ್ಕಳಲ್ಲಿ ಸರ್ಕಾರಿ, ಖಾಸಗಿ ಎಂದು ತಾರತಮ್ಯ ಮಾಡದ ಅಧಿಕಾರಿಗಳು ಈ ವರ್ಷ ಏಕಾಏಕಿ ಖಾಸಗಿ ಶಾಲೆ ಮಕ್ಕಳನ್ನು ಹೊರಗಿಟ್ಟು ಕೇವಲ ಸರ್ಕಾರಿ ಮತ್ತು ಅನುದಾನಿತ ಶಾಲೆಯ 1ರಿಂದ 10ರ ವರೆಗಿನ 15 ಸಾವಿರ ಮಕ್ಕಳ ಲೆಕ್ಕವನ್ನು ಮಾತ್ರ ನಗರಸಭೆಗೆ ನೀಡಿದ್ದರಿಂದ ತಾರತಮ್ಯದ ಆರೋಪ ಕೇಳಿಬಂದಿತ್ತು.
ಈ ಕುರಿತು ಶಿಕ್ಷಕರು, ಖಾಸಗಿ ಶಾಲೆಗಳಲ್ಲಿ ಆಕ್ರೋಶ ವ್ಯಕ್ತವಾಗಿ, ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಬಹಿಷ್ಕರಿಸಿ, ತಮ್ಮ ತಮ್ಮ ಶಾಲೆಗಳಲ್ಲಿಯೇ ಕಾರ್ಯಕ್ರಮ ನಡೆಸಲು ಶಾಲೆಗಳು ಮುಂದಾಗಿದ್ದರು. ಈ ಮಾಹಿತಿ ಹಿನ್ನೆಲೆಯಲ್ಲಿ, ಇಂದು ಸಂಜೆ ಹರಿತಲೇಖನಿ ನ್ಯೂಸ್ ವೆಬ್ಸೈಟ್ ಈ ಕುರಿತಾದ ವರದಿ ಪ್ರಕಟಿಸಿ, ಅಧಿಕಾರಿಗಳ ಗಮನ ಸೆಳೆದಿತ್ತು.
ಈ ಬೆನ್ನಲ್ಲೆ ಎಚ್ಚೆತ್ತ ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ವಾತಂತ್ರ್ಯೋತ್ಸವ ದಿನದಂದು ಶಾಲಾ ಮಕ್ಕಳಲ್ಲಿ ತಾರತಮ್ಯವಾಗದಂತೆ ಸಿಹಿ ಹಂಚಲು ಮುಂದಾಗಿದ್ದು, ನಗರಸಭೆಯಿಂದ ನಾಳೆ ಬೆಳಗ್ಗೆ ಮತ್ತಷ್ಟು ಸಿಹಿ ತರಿಸಿ ವಿತರಿಸುವ ಭರವಸೆ ದೊರೆತಿದೆ ಎಂಬ ಮಾಹಿತಿ ತಿಳಿದು ಬಂದಿದ್ದು, ಸ್ವಾತಂತ್ರ್ಯ ದಿನದಂದು ಉಂಟಾಗಬಹುದಾಗಿದ್ದ ಮುಜುಗರ ಅಧಿಕಾರಿಗಳು ತ್ವರಿತವಾಗಿ ಹೆಚ್ಚೆತ್ತ ಪರಿಣಾಮ ದೂರಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….