ಕೆ.ಆರ್.ಪೇಟೆ: ಮಹಾಲಯ ಅಮಾವಾಸ್ಯೆ ಅಂಗವಾಗಿ ಗವಿಮಠದ ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರ ದೇವಾಲಯದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಕಜ್ಜಾಯಗಳಿಂದ ವಿಶೇಷ ಅಲಂಕಾರ ಹಾಗೂ ವಿಶೇಷ ಪೂಜೆ ಕಾರ್ಯಕ್ರಮ ಜರುಗಿತು.
ತಾಲ್ಲೂಕಿನ ಬೂಕನಕೆರೆ ಹೋಬಳಿಯ ಕಾಪನಹಳ್ಳಿ ಸಮೀಪವಿರುವ ಹಾಗೂ ಶ್ರದ್ಧಾ ಭಕ್ತಿ ಕೇಂದ್ರವಾಗಿರುವ ಗವಿಮಠ ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರ ದೇವಾಲಯದಲ್ಲಿ ಮಹಾಲಯ ಅಮಾಸೆಯ ಪ್ರಯುಕ್ತ ಪವಾಡ ಪುರುಷ ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರ ಗದ್ದಿಗೆ ಗವಿಮಠದ ಪೀಠಾಧ್ಯಕ್ಷ ಶ್ರೀ ಚೆನ್ನವೀರ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ದೇವಾಲಯದ ಮುಖ್ಯ ದ್ವಾರದಿಂದ ಗರ್ಭಗುಡಿಯವರೆಗೆ ಮೂರು ಸಾವಿರಕ್ಕೂ ಹೆಚ್ಚು ಕಜ್ಜಾಯ ಹಾಗೂ ವಿವಿಧ ಬಗ್ಗೆ ಫಲ, ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು.

ಮುಂಜಾನೆಯಿಂದಲೇ ಶ್ರೀಗಳಿಗೆ ವಿಶೇಷ ಅಭಿಷೇಕ,ಹೋಮ-ಹವನ ತುಪ್ಪದ ದೀಪಾರತಿ, ನೆರವೇರಿಸಿತ್ತು. ದೇವಾಲಯದ ಆವರಣದಲ್ಲಿ ಸೇರಿದ್ದ ಭಕ್ತರು ಭಗವಂತನ ದರ್ಶನ ಪಡೆದು ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾದರು.
ಪೂಜಾ ಕಾರ್ಯಕ್ರಮದ ನಂತರ ಭಕ್ತಾದಿಗಳಿಗೆ ಆಶೀರ್ವಚನ ನೀಡಿದ ಪೀಠಾಧ್ಯಕ್ಷ ಶ್ರೀ ಚನ್ನವೀರ ಮಹಾಸ್ವಾಮೀಜಿ, ಇಂದಿನ ಒತ್ತಡದ ಜೀವನದಲ್ಲಿ ಮನಸ್ಸಿಗೆ ಶಾಂತಿ, ನೆಮ್ಮದಿಗಾಗಿ ದೇವರು ಮತ್ತು ಧರ್ಮದ ಮೊರೆ ಹೋಗುವುದು ಅನಿವಾರ್ಯ ಎಂದರು.
ನಮ್ಮ ಪೂರ್ವಿಕರಿಂದ ನಮಗೆ ಬಳುವಳಿಯಾಗಿ ಬಂದಿರುವ ಒಳ್ಳೆಯ ಆಚಾರ-ವಿಚಾರಗಳು ಇಂದು ನಮ್ಮಿಂದ ದೂರಾಗುತ್ತಿದೆ. ಭಗವಂತನ ಸಾಕ್ಷಾತ್ಕಾರಕ್ಕೆ ಆಡಂಬರದ ಪೂಜೆ ಬೇಕಾಗಿಲ್ಲ. ಕಳ್ಳತನ, ಮೋಸ, ವಂಚನೆ ಮಾಡಿ ದೇವರೇ ತಪ್ಪು ಮಾಡಿದ್ದೇನೆ ಕ್ಷಮಿಸಪ್ಪ ಎಂದರೆ ಖಂಡಿತವಾಗಿಯೂ ದೇವರು ಮೋಸಗಾರನ ಮೇಲೆ ಕರುಣೆ ತೋರುವುದಿಲ್ಲ ಎಂದರು.
ಇಂದು ಜನಸಾಮಾನ್ಯರಲ್ಲಿ ದೇವರು, ಧರ್ಮದ ಬಗೆಗೆ ತಾತ್ಸಾರ ಮನೋಭಾವನೆಯು ಹೆಚ್ಚಾಗುತ್ತಿದೆ. ದೇವಾಲಯಗಳಲ್ಲಿ ಕಳ್ಳತನ ನಡೆಯುತ್ತಿದೆ. ದೇವರ ಬಗ್ಗೆ ನಮಗಿರುವ ನಂಬಿಕೆಗಳು ಗಟ್ಟಿಯಾಗುವವರೆಗೂ ಸಮಾಜದಲ್ಲಿ ಮೋಸ-ವಂಚನೆಗೆ ಕೊನೆಯಿಲ್ಲ. ಹೀಗಾಗಿ ನಮ್ಮ ಪಾಲಿನ ಕೆಲಸಗಳನ್ನು ಶ್ರದ್ಧೆ ಮತ್ತು ಆತ್ಮಸಂತೋಷದಿಂದ ಮಾಡಿ ಮುಗಿಸುವ ಮೂಲಕ ಭಗವಂತನ ಸಾಕ್ಷಾತ್ಕಾರ ಹೊಂದಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಆಶೀರ್ವಚನ ನೀಡಿದರು.