ಬೀಜಿಂಗ್: ಚೀನಾದಲ್ಲಿ ಕುಸಿಯುತ್ತಿರುವ ಜನನ ಪ್ರಮಾಣ ದರ ತಡೆಗಟ್ಟಲು ದಂಪತಿಗಳಿಗೆ ಹೆಚ್ಚಿನ ಮಕ್ಕಳನ್ನು ಹೆರುವಂತೆ ಪ್ರೇರೇಪಿಸಲು ‘ಹೆರಿಗೆ ಸಹಾಯಧನ’ ಮತ್ತು ಪೋಷಕರಿಗೆ ತೆರಿಗೆ ಕಡಿತ ಸೇರಿ ಹಲವು ಉತ್ತೇಜನಾಕಾರಿ ನೀತಿಗಳನ್ನು ಸರಕಾರ ಘೋಷಿಸಿದೆ.
ದೇಶದಲ್ಲಿ ಉದ್ಭವಿಸಿರುವ ಜನಸಂಖ್ಯಾ ಬಿಕ್ಕಟ್ಟು ಪರಿಹರಿಸುವ ಸಲುವಾಗಿ, ಕಮ್ಯುನಿಸ್ಟ್ ದೇಶದ ಕೇಂದ್ರ ಸಂಪುಟವು ಮಕ್ಕಳ ಜನನ ಉತ್ತೇಜಿಸುವ ಸೇವೆಗಳನ್ನು ವಿಸ್ತರಿಸಲು ರೂಪಿಸಲಾದ 13 ಉದ್ದೇಶಿತ ಕ್ರಮಗಳ ಕುರಿತು ಸೋಮವಾರ ನಿರ್ದೇಶನ ಹೊರಡಿಸಿದೆ.
ಶಿಕ್ಷಣ, ವಸತಿ ಮತ್ತು ಉದ್ಯೋಗದಲ್ಲಿ ಬೆಂಬಲ ಉತ್ತೇಜನಾಕಾರಿ ನೀತಿ ಹೆಚ್ಚಿಸುವುದು, ಹೆರಿಗೆಗೆ ಪೂರಕವಾದ ವಾತಾವರಣ ನಿರ್ಮಿಸುವುದು ಸೇರಿವೆ. ಈ ಉತ್ತೇಜನಾಕಾರಿ ಕ್ರಮಗಳು, ಹೆರಿಗೆ ಸಹಾಯಧನ ಮತ್ತು ಹೆರಿಗೆಗೆ ಸಂಬಂಧಿಸಿದ ಆದಾಯ ತೆರಿಗೆ ವಿನಾಯಿತಿ ಸುಧಾರಣೆಗಳನ್ನು ಒಳಗೊಂಡಿವೆ ಎಂದು ಅಧಿಕೃತ ಮಾಧ್ಯಮ ವರದಿ ಮಾಡಿದೆ.
ನೌಕರರು ಮತ್ತು ಗ್ರಾಮೀಣ ವಲಸೆ ಕಾರ್ಮಿಕರಿಗೂ ಹೆಚ್ಚು ಮಕ್ಕಳನ್ನು ಹೆರುವಂತೆ ಉತ್ತೇಜನಕಾರಿ ಸವಲತ್ತುಗಳನ್ನು ಸರಕಾರ ಘೋಷಿಸಿದೆ. ಮಾತೃತ್ವ, ಪಿತೃತ್ವ ಮತ್ತು ಶಿಶುಪಾಲನಾ ರಜೆಗೆ ಸಂಬಂಧಿಸಿದ ನೀತಿಗಳನ್ನು ಜಾರಿಗೊಳಿಸುವಂತೆ ಅಧಿಕಾರಿಗಳಿಗೂ ಸೂಚಿಸಲಾಗಿದೆ.
ಹೊಸ ಪೋಷಕರು, ಮಕ್ಕಳನ್ನು ಹೆರಲು, ಲಾಲನೆ-ಪಾಲನೆಗೆ ಉದ್ಯೋಗದ ವೇಳೆ ರಜೆ ತೆಗೆದುಕೊಳ್ಳುವುದು ಸುರಕ್ಷಿತವೆಂದು ಖಾತ್ರಿಪಡಿಸುವ ಗುರಿಯನ್ನು ಈ ಹೊಸ ಕ್ರಮಗಳು ಹೊಂದಿವೆ ಎಂದು ಅಧಿಕೃತ ಸರಕಾರಿ ಮಾಧ್ಯಮ ಸಿಜಿಟಿಎನ್ ವರದಿ ಮಾಡಿದೆ.
ಚೀನಾದ ಗಂಭೀರ ಜನಸಂಖ್ಯಾ ಬಿಕ್ಕಟ್ಟಿಗೆ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು ಅನುಸರಿಸುತ್ತಿರುವ ದಶಕಗಳಷ್ಟು ಹಳೆಯದಾದ ಒಂದು ಮಗು ನೀತಿಯೇ ಕಾರಣವೆಂದು ದೂಷಿಸಲಾಗಿದೆ. 2021ರಲ್ಲಿ ಜನಸಂಖ್ಯಾ ನೀತಿ ಪರಿಷ್ಕರಿಸಿರುವ ಚೀನಾ ದಂಪತಿಗೆ ಮೂರು ಮಕ್ಕಳನ್ನು ಹೊಂದಲು ಅವಕಾಶ ನೀಡಿದೆ.