ಹುಬ್ಬಳ್ಳಿ: ಸಿಲಿಂಡರ್ ಸ್ಫೋಟಗೊಂಡ (Cylinder blast) ದುರಂತದಲ್ಲಿ ಇಬ್ಬರು ಸಾವನಪ್ಪಿದ್ದ ಬೆನ್ನಲ್ಲೇ, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತೋರ್ವ ಗಾಯಾಳು ಅಯ್ಯಪ್ಪ ಮಾಲಾಧಾರಿ ಮೃತಪಟ್ಟ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
19 ವರ್ಷದ ಲಿಂಗರಾಜು ಮೃತ ಅಯ್ಯಪ್ಪ ಮಾಲಾಧಾರಿ ಎಂದು ಗುರುತಿಲಾಗಿದೆ.
ಹಳೇ ಹುಬ್ಬಳ್ಳಿಯ ಸಾಯಿನಗರ ಈಶ್ವರ ದೇವಸ್ಥಾನ ಬಳಿ ಸಂಭವಿಸಿದ್ದ ಸಿಲಿಂಡರ್ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಲಿಂಗರಾಜುನನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ.
ಈ ಮೂಲಕ ಸಿಲಿಂಡರ್ ಸ್ಪೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ಡಿ.25ರ ರಾತ್ರಿ ಸಂಭವಿಸಿದ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ 9 ಜನ ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡಿದ್ದರು. ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಘಟನೆ ವೇಳೆ ಚಿಕಿತ್ಸೆ ಫಲಿಸದೆ ಮಾಲಾಧಾರಿಗಳಾಗಿದ್ದ ನಿಜಲಿಂಗಪ್ಪ ಬೇಪೂರು ಹಾಗೂ ಸಂಜಯ್ ಸವದತ್ತಿ ಮೃತಪಟ್ಟಿದ್ದರು. ಇಂದು ಬೆಳಗ್ಗೆ ಓರ್ವ ಬಾಲಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.