ಹೈದರಾಬಾದ್: ವಿಷ್ಣು ಮಂಚು ನಟನೆಯ ‘ಕಣ್ಣಪ್ಪ’ (Kannappa) ಸಿನಿಮಾ ಜೂನ್ 27 ರಂದು ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ಪ್ರಭಾಸ್, ಮೋಹನ್ ಬಾಬು, ಮೋಹನ್ ಲಾಲ್, ಮತ್ತು ಕಾಜಲ್ ಅಗರ್ವಾಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಬಹುಭಾಷಾ ಚಿತ್ರವಾದ ಇದು ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ಆದರೆ ಇದೀಗ ಬಂದಿರುವ ವರದಿ ಅನ್ವಯ, ಕಣ್ಣಪ್ಪ ಚಿತ್ರದ ಅತ್ಯಂತ ನಿರ್ಣಾಯಕ ವಿಷಯವನ್ನು ಹೊಂದಿರುವ ಹಾರ್ಡ್ ಡ್ರೈವ್ ಜತೆ ಇಬ್ಬರು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಮುಂಬೈನ HIVE ಸ್ಟುಡಿಯೋಸ್, ಕಣ್ಣಪ್ಪ ಚಿತ್ರದ ಅತ್ಯಂತ ನಿರ್ಣಾಯಕ ವಿಷಯವನ್ನು ಹೊಂದಿರುವ ಹಾರ್ಡ್ ಡ್ರೈವ್ ಅನ್ನು DTDC ಕೊರಿಯರ್ ಮೂಲಕ ಫಿಲ್ಮ್ ನಗರದ ಫೋರ್ ಫ್ರೇಮ್ಸ್ಗೆ ಕಳುಹಿಸಿತು.
ಫೋರ್ ಫ್ರೇಮ್ಸ್ ಈ ತಿಂಗಳ 25 ರಂದು ಆಫೀಸ್ ಬಾಯ್ ರಘು ಪಾರ್ಸೆಲ್ ತೆಗೆದುಕೊಂಡು ಹೋಗಿ ಚರಿತಾ ಎಂಬ ಮಹಿಳೆಗೆ ನೀಡಿದ್ದನೆಂದು ಹೇಳಿದ್ದು, ಅಂದಿನಿಂದ ಆ ಇಬ್ಬರು ಕಾಣೆಯಾಗಿದ್ದಾರಂತೆ.
ಫೋರ್ ಫ್ರೇಮ್ಸ್ ತಂಡವು ಪೊಲೀಸರಿಗೆ ದೂರು ನೀಡಿದ್ದು, ಕೆಲವು ದಿಗ್ಗಜರು ತಮ್ಮ ಚಿತ್ರಕ್ಕೆ ಹಾನಿ ಮಾಡಲು ಸಂಚು ರೂಪಿಸುತ್ತಿದ್ದಾರೆ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.