ದೊಡ್ಡಬಳ್ಳಾಪುರ: ಬೆಂಗಳೂರಿನಲ್ಲಿ ನಡೆದ RCB ವಿಜಯೋತ್ಸವ ಸಂಭ್ರಮಾಚರಣೆಯಲ್ಲಿ ನಡೆದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳ ಅಮಾನತು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಗರ ಬಣದ ವತಿಯಿಂದ ಶನಿವಾರ ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ರಮೇಶ್, ಸರ್ಕಾರ ಯಾವುದೇ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳದೆ ಕಾರ್ಯಕ್ರಮ ಆಯೋಜನೆ ಮಾಡಿದ್ದೇ ಅನಾಹುತಕ್ಕೆ ಕಾರಣವಾಗಿದೆ.
ರಾಜಕೀಯ ನಾಯಕರ ಪ್ರಚಾರಕ್ಕಾಗಿ ತಾರಾತುರಿಯಲ್ಲಿ ಅಭಿನಂದನ ಸಮಾರಂಭ ಮಾಡಿದ್ರ ಪರಿಣಾಮವೇ 11 ಜನ ಮೃತಪಡಲು ಕಾರಣವಾಗಿದೆ. ರಾಜ್ಯ ಸರ್ಕಾರವೇ ಈ ಅನಾಹುತಕ್ಕೆ ನೇರ ಹೊಣೆಯಾಗಿದೆ.
ಪೊಲೀಸರ ಸಮಯ ಪ್ರಜ್ಞೆಯಿಂದಲೇ ಹೆಚ್ಚಿನ ಜೀವ ಹಾನಿಯಾಗುವುದು ತಪ್ಪಿದೆ. ಹೀಗಿದ್ದೂ ಸಹ ಏನೂ ತಪ್ಪು ಮಾಡದೆ ಜೀವದ ಮೇಲಿನ ಹಂಗು ತೊರೆದು ರಾತ್ರಿ ಹಗಲೆನ್ನದೆ ಕರ್ತವ್ಯ ನಿರ್ವಹಿಸಿರುವ ಪೊಲೀಸ್ ಅಧಿಕಾರಿಗಳ ಅಮಾನತು ಆದೇಶವನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವೇದಿಕೆಯ ಸಂಘಟನಾ ಕಾರ್ಯದರ್ಶಿ ಅರವಿಂದ್, ದೊಡ್ಡೇಗೌಡ, ರಾಜ್ಯ ಸಂಚಾಲಕ ಪಿ.ವಾಸು, ನರೇಂದ್ರ, ಜಿಲ್ಲಾ ಯುವ ಘಟಕದ ಅಧ್ಯಕ್ಷ ರಂಜಿತ್, ತಾಲ್ಲೂಕು ಘಟಕದ ಅಧ್ಯಕ್ಷ ವಿನಯ್, ಉಪಾಧ್ಯಕ್ಷ ಅಂಬರೀಶ್, ಅಶ್ವಥ್ ನಾರಾಯಣ್, ಪ್ರದೀಪ್ ಕುಮಾರ್, ತಾಲ್ಲೂಕು ಕಾರ್ಮಿಕ ಘಟಕದ ಅಧ್ಯಕ್ಷ ಶಿವಶಂಕರರೆಡ್ಡಿ, ಮುಖಂಡರಾದ ಶಿವಶಂಕರ್, ಶಿವಣ್ಣ ಇದ್ದರು.