ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿನ ಹಿಂದೂಗಳ ಪವಿತ್ರ ಸ್ಥಳವಾದ ಅಮರನಾಥ ಯಾತ್ರೆ 2025 (Amarnath Yatra 2025) ಕೆಲ ದಿನಗಳಲ್ಲೇ ಆರಂಭವಾಗಲಿದೆ.
ಯಾತ್ರೆಯ ವೇಳೆ ಅಹಿತಕರ ಘಟನೆ ನಡೆಯದಂತೆ ನಿಗಾ ಇಡಲು ಭಾರತೀಯ ಸೇನಾಪಡೆ ‘ಆಪರೇಷನ್ ಶಿವ'( Operation Shiva) ಕಾರ್ಯಾಚರಣೆ ಕೈಗೊಂಡಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ ನಂತರ ಜಮ್ಮು-ಕಾಶ್ಮೀರದಲ್ಲಿ ಪ್ರವಾಸಿಗರು ಮತ್ತು ಯಾತ್ರಿಕರ ರಕ್ಷಣೆಗೆ ಹೆಚ್ಚಿನ ಗಮನ ಹರಿಸಲಾಗಿದೆ.
ಜು.3ರಿಂದ 38 ದಿನಗಳ ಕಾಲ ನಡೆಯುವ ಅಮರನಾಥ ಯಾತ್ರೆಗೆ ಸಂಪೂರ್ಣ ಭದ್ರತೆ ಒದಗಿಸಲು ಭಾರತೀಯ ಸೇನೆ, ಸಿಆರ್‌ಪಿಎಫ್ ಮತ್ತು ಕಾಶ್ಮೀರ ಪೊಲೀಸ್ ಇಲಾಖೆ ಜಂಟಿಯಾಗಿ ‘ಆಪರೇಷನ್ ಶಿವ’ ಕಾರ್ಯಾಚರಣೆ ಆರಂಭಿಸಿದೆ.
ಆ.9ರಂದು ಯಾತ್ರೆ ಕೊನೆಗೊಳ್ಳಲಿದ್ದು, ಅಲ್ಲಿಯವರೆಗೂ ‘ಆಪರೇಷನ್ ಶಿವ’ ಯೋಧರು ಅಮರನಾಥ ಯಾತ್ರಿಕರಿಗೆ ಹೆಜ್ಜೆ ಹೆಜ್ಜೆಗೂ ಸುರಕ್ಷೆ ಹಾಗೂ ಸುಗಮ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಿದ್ದಾರೆ.
ಕಳೆದ ಬಾರಿಗಿಂತ ಈ ಬಾರಿ ಯಾತ್ರೆ ಅವಧಿ 14 ದಿನಗಳಷ್ಟು ಕಡಿಮೆಯಾಗಿದೆ.
ಏ.22ರ ಪಹಲ್ಗಾಮ್ ಭಯೋತ್ಪಾದಕ ದಾಳಿ ಹಿನ್ನೆಲೆ ಭಾರತೀಯ ಸೇನೆಯು ಕೇಂದ್ರದ ಸಶಸ್ತ್ರ ಪೊಲೀಸ್ ಪಡೆ(ಸಿಎಪಿಎಫ್), ಜಮ್ಮು-ಕಾಶ್ಮೀರ ಪೊಲೀಸ್ ಮತ್ತು ಅಮರನಾಥ ದೇವಾಲಯ ಮಂಡಳಿ ಸಮನ್ವಯದಲ್ಲಿ ಆಪರೇಶನ್ ಶಿವ ಯೋಜನೆ ಹಮ್ಮಿಕೊಳ್ಳಲಾಗಿದೆ.
ಸಿಆರ್‌ಪಿಎಫ್, ಬಿಎಸ್‌ಎಫ್, ಎಸ್‌ಎಸ್‌ಬಿ, ಐಟಿಬಿಪಿ ಮತ್ತು ಸಿಐಎಸ್‌ಎಫ್‌ನ ಒಟ್ಟು 42 ಸಾವಿರ ಯೋಧರು ಆಪರೇಷನ್ ಶಿವದಲ್ಲಿ ಭಾಗಿಯಾಗಿದ್ದಾರೆ.
ಈ ಭದ್ರತಾ ಕಾರ್ಯಾಚರಣೆಯಲ್ಲಿ ಅಮರನಾಥ ಯಾತ್ರೆಯ ಮಾರ್ಗ, ಡೋನ್ ಕಣ್ಣಾವಲು, ಸಿಸಿಟಿವಿ ಮೇಲ್ವಿಚಾರಣೆ ಮತ್ತು ಮೂರು ಹಂತದ ಭದ್ರತಾ ವ್ಯವಸ್ಥೆಯ ಭಾಗವಾಗಿ ಗುಂಡು ನಿರೋಧಕ ವಾಹನಗಳ ನಿಯೋಜನೆ ಮಾಡಲಾಗಿದೆ.
ಜಾಮರ್‌ಗಳನ್ನೂ ಅಳವಡಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾತ್ರಿಕರದ್ದಲ್ಲದ ಇತರೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.
ಅರಸೇನಾಪಡೆ ಮತ್ತು ಕಾಶ್ಮೀರದ ಪೊಲೀಸರ 50,000 ಸಿಬ್ಬಂದಿಗಳು ಪ್ರತಿದಿನವೂ ಅಮರನಾಥ ಯಾತ್ರೆ ಮಾರ್ಗದಲ್ಲಿ ಸ್ಫೋಟಕಗಳಿಗಾಗಿ ಶೋಧ ನಡೆಸಲಿದ್ದಾರೆ.