ದೊಡ್ಡಬಳ್ಳಾಪುರ: ನಗರದ ಗಣ್ಯ ವಾಣಿಜ್ಯೋದ್ಯಮಿ ಹಾಗೂ ಸಮಾಜ ಸೇವಕ ಹುಂಗಿ ಎಚ್.ಪಿ.ಶಂಕರ್ (Hungi H.P. Shankar) ಭಾನುವಾರ ರಾತ್ರಿ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಎಚ್.ಪಿ.ಶಂಕರ್ ಅವರು ನಗರದ ಟಿ.ಎಂ.ಸಿ.ಬ್ಯಾಂಕ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ರಾಜ್ಯ ದೇವಾಂಗ ಸಂಘದಿಂದ ದೇವಾಂಗ ಕುಲರತ್ನ ಪ್ರಶಸ್ತಿಗೆ ಭಾಜನರಾಗಿದ್ದರು.
ನಗರದ ಶಿರಡಿ ಸಾಯಿಬಾಬಾ ಮಂದಿರ ಮತ್ತು ಸೇವಾಶ್ರಮ ಟ್ರಸ್ಟ್ ಅಧ್ಯಕ್ಷರಾಗಿದ್ದರು. ಚಿಕ್ಕತುಮಕೂರಿನ ಮುಕ್ತಿಧಾಮ ಸ್ಥಾಪನೆಗೆ ಮಹತ್ತರ ಕೊಡುಗೆ ನೀಡಿದ್ದರು.
ನೇಕಾರರ ಹಾಗೂ ದೇವಾಂಗ ಸಂಘಟನೆಗಳೊಂದಿಗೆ ಒಡನಾಟವಿರಿಸಿಕೊಂಡು ಸಾಮಾಜಿಕ ಸೇವೆ ಸಲ್ಲಿಸಿದ್ದರು.
ಮೃತರ ಅಂತ್ಯಕ್ರಿಯೆ ಸೋಮವಾರ ಸಂಜೆ ತಾಲೂಕಿನ ಕೋಳಿಪುರ ಗ್ರಾಮದ ಅವರ ಸ್ವಂತ ಜಮೀನಿನಲ್ಲಿ ನೆರವೇರಿತು.
ನಳಂದ ಪ್ರೌಢಶಾಲೆ ಮತ್ತು ಲಿಟ್ಲ್ ಏಂಜೆಲ್ಸ್ ಅನಂತ ಶಾಲೆಗಳಲ್ಲಿ ಸಂತಾಪ ಸೂಚಕ ಸಭೆ
ಹುಂಗಿ ಹೆಚ್.ಪಿ ಶಂಕರ್ ಅವರ ಸ್ಮರಣಾರ್ಥ ನಗರದ ನಳಂದ ಪ್ರೌಢಶಾಲೆ ( Nalanda High School) ಮತ್ತು ಲಿಟ್ಲ್ ಏಂಜೆಲ್ಸ್ ಅನಂತ ಶಾಲೆಗಳಲ್ಲಿ (Little Angels Anantha School) ಸಂತಾಪ ಸೂಚಕ ಸಭೆಯನ್ನು ಏರ್ಪಡಿಸಲಾಗಿತ್ತು.
ಹುಂಗಿ ಹೆಚ್.ಪಿ ಶಂಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪನಮನ ಸಲ್ಲಿಸಲಾಯಿತು
ಈ ವೇಳೆ ಮಾತನಾಡಿದ ಶಾಲೆಯ ಕಾರ್ಯದರ್ಶಿ ಅನುರಾಧ ಕೆ ಆರ್ (Anuradha KR) ಅವರು, ಮೃತ ಹುಂಗಿ ಹೆಚ್.ಪಿ ಶಂಕರ್ ಅವರ ಸಮಾಜಮುಖಿ ಕಾರ್ಯಗಳನ್ನು ಸ್ಮರಿಸಿದರು.
ಹುಂಗಿ ಹೆಚ್.ಪಿ ಶಂಕರ್ ಅವರು, ದೊಡ್ಡಬಳ್ಳಾಪುರದ ದೇವಾಂಗ ಸಂಘದ ರುದ್ರಭೂಮಿ ಮುಕ್ತಿಧಾಮ ಅಸ್ತಿತ್ವಕ್ಕೆ ಬರಲು ಮೂಲ ಕಾರಣಕರ್ತರಾಗಿದ್ದರು.
ಗ್ರಾನೈಟ್ ಉದ್ಯಮಿಯೂ ಆಗಿದ್ದ ಅವರು ಊರಿನ ಅನೇಕ ದೇವಾಲಯಗಳಿಗೆ ಹಾಗೂ ಸರ್ಕಾರಿ ಶಾಲೆಗಳಿಗೆ ಗ್ರಾನೈಟ್ ಅನ್ನು ಕೊಡುಗೆಯಾಗಿ ಹಾಕಿಸಿಕೊಟ್ಟಿದ್ದರು.
ದೊಡ್ಡಬಳ್ಳಾಪುರದ ಲಯನ್ಸ್ ಕ್ಲಬ್, ಟೆಕ್ಸ್ಟ್ ಟೈಲ್ ಬ್ಯಾಂಕ್, ದೇವಾಂಗ ಸಂಘ ಮುಂತಾದ ಅನೇಕ ಸಂಘ-ಸಂಸ್ಥೆಗಳ ಪೋಷಕರೂ ಆಗಿದ್ದರು.
ಊರಿನ ಅನೇಕ ಕಾರ್ಯಕ್ರಮಗಳಿಗೆ ಸಹಾಯ ಹಸ್ತ ನೀಡಿ ಕೊಡುಗೈ ದಾನಿ ಎನಿಸಿದ್ದರು. ಅನೇಕ ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಹಾಗೂ ವಾರಾನ್ನವನ್ನು ನೀಡುತ್ತಿದ್ದರು.
ಕೊರೊನಾ ಸಂದರ್ಭದಲ್ಲಿ ಸಾವಿರಾರು ಜನರಿಗೆ ಫುಡ್ ಕಿಟ್ ನೀಡಿ ಸಹಾಯ ಮಾಡಿದ್ದರು ಎಂದು ಸ್ಮರಿಸಿದರು.
ಈ ವೇಳೆ ಶಾಲೆಯ ಮುಖ್ಯ ಶಿಕ್ಷಕರು ಸಹ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.