ದೊಡ್ಡಬಳ್ಳಾಪುರ: ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಯುವತಿ ಕಿರುಕುಳ ಎಂದು ಆರೋಪಿಸಿ ಯುವಕನೋರ್ವ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ತಾಲೂಕಿನ ರಾಜಘಟ್ಟ ಕೆರೆಯ ಬಳಿ ನಡೆದಿದೆ.
ಮೃತ ಯುವಕನನ್ನು ಬೆಂಗಳೂರಿನ ಸೀಗೇಹಳ್ಳಿ ನಿವಾಸಿ ಮಂಜುನಾಥ್ ಎಂದು ಗುರುತಿಸಲಾಗಿದೆ.
ಸಾವಿಗೂ ಮುನ್ನ ಮಂಜುನಾಥ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ನನ್ನ ಸಾವಿಗೆ *** ಎನ್ನುವ ಯುವತಿ ಕಾರಣ. ಆಕೆ ನನಗೆ ನಂಬಿಸಿ ಮೋಸ ಮಾಡಿದ್ದಾಳೆ. ಆಕೆಗೆ ಬೇರೋಬ್ಬನ ಜೊತೆಯಲ್ಲಿ ಸಂಬಂಧವಿತ್ತು. ಆದರೂ ಕೂಡ ನಾನು ಮದುವೆ ಆಗಲು ತೀರ್ಮಾನ ಮಾಡಿದ್ದೆ. ಆದರೆ ಆಕೆ ನನ್ನನ್ನು ಜೈಲಿಗೆ ಕಳಿಸಿದ್ದಳು.
ಕಳೆದ ಫೆಬ್ರವರಿಯಲ್ಲಿ ಕುಂಬಳಗೋಡು ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಜಾಮೀನು ವಿಚಾರವಾಗಿ ಹಣ ಪಡೆದಿದ್ದಳು. ಹಣಕ್ಕೆ ಹೆಚ್ಚು ಬೇಡಿಕೆ ಇಟ್ಟು ಕಿರುಕುಳ ನೀಡಿದ್ದಾಳೆ ಎಂದು ವಿಡಿಯೋದಲ್ಲಿ ಮಂಜುನಾಥ್ ಆರೋಪ ಮಾಡಿದ್ದಾನೆ.
ಜೂ 13ರಂದು ಮಂಜುನಾಥ್ ವಿಷದ ಮಾತ್ರೆಗಳನ್ನು ಸೇವಿಸಿದ್ದಾನೆ. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಆತನನ್ನು ದೊಡ್ಡಬಳ್ಳಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿ ಆಗದೇ ಸಾವನ್ನಪ್ಪಿದ್ದಾನೆ.
ಮಂಜುನಾಥ್ ಆತ್ಮಹತ್ಯೆ ಕುರಿತಂತೆ ಯುವತಿಯ ವಿರುದ್ಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆದರೆ ಎಲ್ಲಿಂದಲೋ ಬಂದು ಆತ್ಮಹತ್ಯೆ ಮಾಡಿಕೊಂಡು, ಸಾಮಾಜಿಕ ಜಾಲತಾಣದಲ್ಲಿ ಗ್ರಾಮ ಹಾಗೂ ತಾಲೂಕಿನ ಹೆಸರು ಉಲ್ಲೇಖ ಆಗುತ್ತಿರುವುದು, ಗ್ರಾಮಸ್ಥರ ಬೇಸರಕ್ಕೆ ಕಾರಣವಾಗಿದೆ.
ಈ ಘಟನೆ ಕುರಿತು ಎರಡೂ ಕುಟುಂಬಗಳ ಹಿತ ದೃಷ್ಟಿಯಿಂದ ಹರಿತಲೇಖನಿ ಪೋಟೋ ಮತ್ತು ವಿಡಿಯೋ ಪ್ರದರ್ಶಿಸುತ್ತಿಲ್ಲ.