ಬೆಂಗಳೂರು: ಮುಜರಾಯಿ ಇಲಾಖೆಯಿಂದ ಆಂಧ್ರಪ್ರದೇಶದ ತಿರುಮಲದ (Tirumala) ಕರ್ನಾಟಕ ಛತ್ರದಲ್ಲಿ ನಿರ್ಮಾಣ ಗೊಂಡಿರುವ ಕೃಷ್ಣರಾಜೇಂದ್ರ ಒಡೆಯರ್ ಬ್ಲಾಕ್ ಕಲ್ಯಾಣ ಮಂಟಪವನ್ನು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಉದ್ಘಾಟಿಸಿದರು.

ಸುಮಾರು 500 ಆಸನದ ಸಾಮರ್ಥ್ಯದ ಈ ಕಲ್ಯಾಣ ಮಂಟಪವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ತಿರುಮಲದಲ್ಲಿ ನಿರ್ಮಾಣ ವಾಗಿರುವ 36 ಕೊಠಡಿಗಳ ವಿಐಪಿ ಬ್ಲಾಕ್, ಕಲ್ಯಾಣಿ ಮತ್ತು ಕರ್ನಾಟಕ ಛತ್ರದ ದೇವಸ್ಥಾನದ ಉದ್ಘಾಟನೆ ಸೆಪ್ಟೆಂಬರ್‌ನಲ್ಲಿ ನಡೆಯಲಿದೆ.
36 ಸುಸಜ್ಜಿತ ಕೊಠಡಿಗಳ ವಿಐಪಿ ಬ್ಲಾಕ್ ಕಾಮಗಾರಿ ಈಗಾಗಲೇ ಬಹುತೇಕ ಪೂರ್ಣ ವಾಗಿದೆ. ಅಂತಿಮ ಹಂತದ ಕೆಲಸಗಳು ಪ್ರಗತಿಯಲ್ಲಿವೆ. ಸೆಪ್ಟೆಂಬರ್ ವೇಳೆಗೆ ಪೂಣಗೊಳ್ಳಲಿದೆ ಎಂದು ಭರವಸೆ ನೀಡಿದರು.
ಈ ಕಲ್ಯಾಣ ಮಂಟಪ 500 ಆಸನಗಳ ಸಾಮರ್ಥ್ಯ ಹಾಗೂ 13 ಕೊಠಡಿಗಳನ್ನು ಒಳಗೊಂಡಿದೆ. ಕರ್ನಾಟಕದಿಂದ ಬಂದು ತಿರುಮಲದಲ್ಲಿ ಮದುವೆ, ನಾಮಕರಣ ಮೊದಲಾದ ಶುಭ ಸಮಾರಂಭಗಳನ್ನು ಆಯೋಜನೆ ಮಾಡುವ ಭಕ್ತರಿಗೆ ಇದು ಲಭ್ಯವಿರಲಿದೆ.
ಶ್ರೀ ಕೃಷ್ಣ ರಾಜೇಂದ್ರ ಒಡೆಯರ್ ಕಲ್ಯಾಣ ಮಂಟಪ ನಿರ್ಮಾಣ ತಿರುಮಲಕ್ಕೆ ಆಗಮಿಸುವ ಕರ್ನಾಟಕದ ಭಕ್ತರ ಅನುಕೂಲತೆಯತ್ತ ರಾಜ್ಯ ಸರ್ಕಾರ ಕೈಗೊಂಡ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಆನ್ ಲೈನ್ ಮೂಲಕ ಬುಕ್ಕಿಂಗ್ ಮಾಡಿಕೊಂಡು ಈ ಸೇವೆಯನ್ನು ಕರ್ನಾಟಕದ ಭಕ್ತರು ಪಡೆದುಕೊಳ್ಳಬಹುದು.
ಸೆಪ್ಟೆಂಬರ್‌ನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೇರಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಕರ್ನಾಟಕ ಸರಕಾರದಿಂದ ನಿರ್ಮಾಣಗೊಂಡಿ ರುವ 36 ಕೋಣೆಯ ಬ್ಲಾಕ್, ಕಲ್ಯಾಣಿ ಮತ್ತು ದೇವಸ್ಥಾನದ ಉದ್ಘಾಟನೆ ನಡೆಯಲಿದೆ.
ಈ ಮೂಲಕ ಬಹಳ ವರ್ಷಗಳ ಕರ್ನಾಟಕ ಭಕ್ತರ ಕನಸು ನಸಸಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಠಾರಿಯ, ಮುಜರಾಯಿ ಇಲಾಖೆ ಆಯುಕ್ತರಾದ ಎಂ. ವಿ ವೆಂಕಟೇಶ್ ಸೇರಿದಂತೆ ಅನೇಕ ಮುಖಂಡರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.