ದೊಡ್ಡಬಳ್ಳಾಪುರ: ಹಿಂದೂಪುರ – ಯಲಹಂಕ ನಡುವಣ ರಾಜ್ಯ ಹೆದ್ದಾರಿ ಮಾಕಳಿ ಬಳಿಯ ಮೇಲಿನ ನಾಯಕರಂಡಹಳ್ಳಿ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ (Accident) ಮೃತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.
ದೊಡ್ಡಬಳ್ಳಾಪುರದ ಕರೇನಹಳ್ಳಿಯವರು ಇನೋವಾ ಕಾರಿನಲ್ಲಿ ಗೌರಿಬಿದನೂರು ಮಾರ್ಗವಾಗಿ ಮಂಚೇನಹಳ್ಳಿ ಬಳಿಯ ಭೀಮೇಶ್ವರ ದೇವಸ್ಥಾನಕ್ಕೆ ತೆರಳುವ ವೇಳೆ ಮೇಲಿನ ನಾಯಕರಂಡಹಳ್ಳಿ ಬಳಿ ಈ ದುರ್ಘಟನೆ ಸಂಭವಿಸಿತ್ತು.
ಮೃತರನ್ನು ದೊಡ್ಡಬಳ್ಳಾಪುರ ನಗರದ ದೇವರಾಜ ನಗರದ ನಿವಾಸಿ ಡಿ.ಎಂ.ಈಶ್ವರಪ್ಪ, ಕರೇನಹಳ್ಳಿ ನಿವಾಸಿ ಪುರುಷೋತ್ತಮ (62 ವರ್ಷ), ಕಾಳಪ್ಪ (69 ವರ್ಷ), ಕಾರಿನ ಚಾಲಕ ನರಸಿಂಹ ಮೂರ್ತಿ (50 ವರ್ಷ) ಎಂದು ಗುರುತಿಸಲಾಗಿತ್ತು.
ಆದರೆ ಇದೀಗ ಬಂದ ಮಾಹಿತಿ ಅನ್ವಯ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದ ಕರೇನಹಳ್ಳಿ ನಿವಾಸಿ ಗೋಪಿನಾಥ್ (56 ವರ್ಷ) ಎನ್ನುವವರು ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮತ್ತೋರ್ವ ವ್ಯಕ್ತಿ ಸಾವನಪ್ಪಿದ್ದಾರೆ ಎನ್ನಲಾಗಿದ್ದು, ಅಧಿಕೃತ ಮಾಹಿತಿ ತಿಳಿದುಬಂದಿಲ್ಲ.
8 ಜನರು ಇನೋವಾ ಕಾರಿನಲ್ಲಿ ನಗರದಿಂದ ಗೌರಿಬಿದನೂರು ಸಮೀಪದ ಮಂಚೇನಹಳ್ಳಿಯ ಭೀಮೇಶ್ವರ ಬೆಟ್ಟಕ್ಕೆ ಹೋಗುವಾಗ ಅಪಘಾತ ನಡೆದಿದೆ.
ಕಾರಿನಲ್ಲಿದ್ದ ಇನ್ನೂ ಒಬ್ಬರ ಸ್ಥಿತಿ ಗಂಬೀರವಾಗಿದ್ದು, ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಬ್ಬ ಪ್ರಯಾಣಿಕನಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಡಿವೈಎಸ್ಪಿ ರವಿ, ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ಹಾಗೂ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ.