Harithalekhani; ದಾನವನ್ನು ಅಹಂಕಾರ ಅರ್ಥಾತ್ ‘ನನ್ನ’ ತನದಿಂದ ನೀಡಬಾರದು. ಅಹಂಕಾರದಿಂದ ಮಾಡಿರುವ ದಾನಕ್ಕೆ ಯಾವುದೇ ಲಾಭವಿರುವುದಿಲ್ಲ. ಇದರ ಮಹತ್ವವನ್ನು ಒಂದು ಕಥೆಯಿಂದ ತಿಳಿದುಕೊಳ್ಳೋಣ.
ಮಹಾಭಾರತ ಕಾಲದ ಕಥೆಯಾಗಿದೆ. ಒಬ್ಬ ಬ್ರಾಹ್ಮಣನು ಭಿಕ್ಷೆಯನ್ನು ಬೇಡಿ ತನ್ನ ಕುಟುಂಬದವರ ಹೊಟ್ಟೆಯನ್ನು ತುಂಬಿಸುತ್ತಿದ್ದನು. ಒಮ್ಮೆ ಆ ಬ್ರಾಹ್ಮಣ ಹಾಗೂ ಅವನ ಕುಟುಂಬದವರು ಊಟವನ್ನು ತಯಾರಿಸುತ್ತಿದ್ದರು.
ಅದೇ ಸಮಯದಲ್ಲಿ ಒಬ್ಬ ವೃದ್ಧ ವ್ಯಕ್ತಿ ಅವರ ಮನೆಯ ಬಾಗಿಲಿಗೆ ಬಂದನು. ಅವನು ಹಸಿದಿದ್ದನು ಮತ್ತು ಅವನು ಭಿಕ್ಷೆಯಲ್ಲಿ ಏನಾದರೂ ತಿನ್ನಲು ಕೊಡುವಂತೆ ಕೇಳಿದನು. ಬ್ರಾಹ್ಮಣ ಕುಟುಂಬದವರು ತಮ್ಮ ಸಂಪೂರ್ಣ ಊಟವನ್ನು ಆ ವೃದ್ಧ ಅತಿಥಿಗೆ ಅರ್ಪಿಸಿದರು. ಆ ವೃದ್ಧ ಅತಿಥಿ ಅನ್ನವನ್ನು ಗ್ರಹಣ ಮಾಡಿ ತೃಪ್ತನಾದನು. ತದನಂತರ ಅತಿಥಿಯು ತನ್ನ ಕೈಗಳನ್ನು ತೊಳೆದನು.
ಅದೇ ಸಮಯದಲ್ಲಿ ಅಲ್ಲಿಗೆ ಒಂದು ಮುಂಗುಸಿ ಬಂದಿತು ಮತ್ತು ಎಲ್ಲಿ ಆ ಅತಿಥಿಯು ಕೈತೊಳೆದಿದ್ದನೋ, ಆ ಸ್ಥಾನದಲ್ಲಿ ಬಿದ್ದ ನೀರಿನಲ್ಲಿ ಆ ಮುಂಗುಸಿ ಹೊರಳಾಡತೊಡಗಿತು. ಮುಂಗುಸಿಯ ಅರ್ಧಶರೀರ ಬಂಗಾರದ ಬಣ್ಣದ್ದಾಯಿತು. ಈ ವಿಷಯವು ಅರಣ್ಯದಲ್ಲಿ ಹರಡುವ ಬೆಂಕಿಯಂತೆ ಎಲ್ಲೆಡೆಯೂ ಹಬ್ಬಿತು.
ಧರ್ಮರಾಜ ಯುಧಿಷ್ಠಿರನಿಗೂ ಈ ವಿಷಯ ತಲುಪಿತು. ಆಗ ಅವನ ಮನಸ್ಸಿನಲ್ಲಿ ‘ನಾನಂತೂ ಲಕ್ಷಾಂತರ ಜನರಿಗೆ ಪ್ರತಿದಿನ ಊಟವನ್ನು ಹಾಕುತ್ತೇನೆ. ಒಂದು ವೇಳೆ ಇಲ್ಲಿಗೆ ಬಂದು ಆ ಮುಂಗುಸಿ ಹೊರಳಾಡಿದರೆ ಅದರ ಉಳಿದರ್ಧ ಭಾಗವೂ ಬಂಗಾರದ ಬಣ್ಣವಾಗುವುದು’ ಎಂದು ವಿಚಾರ ಮಾಡಿದರು.
ಯುಧಿಷ್ಠಿರನು ಒಂದು ಅನ್ನ ಛತ್ರವನ್ನು ಆಯೋಜಿಸಿದನು. ಅಲ್ಲಿಯೂ ಅದೇ ಮುಂಗುಸಿ ಬಂದಿತು ಮತ್ತು ಅದು ಅದೇ ರೀತಿ ಮಾಡಿತು; ಆದರೆ ಅದರ ಉಳಿದರ್ಧ ಶರೀರ ಮೂಲ ಬಣ್ಣದ್ದಾಗಿಯೇ ಉಳಿಯಿತು. ಧರ್ಮರಾಜನು ಇದರ ಕಾರಣವನ್ನು ಕೇಳಿದಾಗ, ಭಗವಾನ ಶ್ರೀಕೃಷ್ಣನು ‘ಹೇ ರಾಜಾ! ನೀನು ಎಷ್ಟು ಜನರಿಗೆ ಭೋಜನವನ್ನು ಬಡಿಸಬಲ್ಲೆ, ಅನ್ನದಾನ ಮಾಡಬಲ್ಲೆ ಎನ್ನುವ ಅಹಂಕಾರ ನಿನಗೆ ಇದೆ.
ಈ ಅಹಂಕಾರದ ಕಾರಣವೇ ಈ ಮುಂಗುಸಿಯ ಶರೀರ ಬಂಗಾರದ ಬಣ್ಣಕ್ಕೆ ತಿರುಗಲಿಲ್ಲ. ಆ ಬಡ ಬ್ರಾಹ್ಮಣನ ಕುಟುಂಬದವರು ಮಾತ್ರ ಮನೆಗೆ ಬಂದ ಅತಿಥಿ ಬರಿಹೊಟ್ಟೆಯಲ್ಲಿ ಹಿಂದಿರುಗಿ ಹೋಗಬಾರದು ಎಂದು ತಾವು ಬರಿಹೊಟ್ಟೆಯಲ್ಲಿದ್ದರೂ ಅತಿಥಿಗೆ ಊಟವನ್ನು ಬಡಿಸಿದರು. ಅದರ ಹಿಂದೆ ಯಾವುದೇ ಸ್ವಾರ್ಥ ಅಥವಾ ಅಹಂಕಾರವಿರಲಿಲ್ಲ’ ಎಂದು ಹೇಳಿದನು.
ಕೃಪೆ: ಸಾಮಾಜಿಕ ಜಾಲತಾಣ.