ದೊಡ್ಡಬಳ್ಳಾಪುರ: ತಾಲೂಕಿನ ಮಲ್ಲೋಹಳ್ಳಿ ಗ್ರಾಮಸ್ಥರಿಗೆ ಚಿರತೆ (Leopard) ಆತಂಕ ಎದುರಾಗಿದ್ದು, ಒಂಟಿಯಾಗಿ ಓಡಾಡಲು ಭಯಪಡುವಂತ ಸನ್ನಿವೇಶ ಉಂಟಾಗಿದೆ.
ಕಳೆದ ಮೂರು ದಿನಗಳಲ್ಲಿ ಎರಡು ಮೇಕೆ ಹಾಗೂ ಒಂದು ಸಾಕು ನಾಯಿಯನ್ನು ಚಿರತೆ ಬಲಿ ಪಡೆದಿದ್ದು ಗ್ರಾಮಸ್ಥರ ಆತಂಕ ಮತ್ತಷ್ಟು ಹೆಚ್ಚುವಂತೆ ಮಾಡಿದೆ.
ಎರಡು ದಿನಗಳ ಹಿಂದೆ ಮಲ್ಲೋಹಳ್ಳಿ ಹೊರವಲಯದಲ್ಲಿರುವ ಮಧುರೆ ಕೆರೆ ಬಳಿ ಮುನಿರಾಜು ಎನ್ನುವವರು ಮೇಕೆ ಮೇಸುವಾಗ ಚಿರತೆ ದಾಳಿ ಮಾಡಿ ಎರಡು ಮೇಕೆಗಳನ್ನು ಕೊಂದುಹಾಕಿದ್ದರೆ, ನಿನ್ನೆ ರಾತ್ರಿ (ಗುರುವಾರ) ಜಯಣ್ಣ ಎನ್ನುವವರ ತೋಟದ ಮನೆ ಬಳಿಯಿಂದ ಸಾಕು ನಾಯಿಯನ್ನು ಚಿರತೆ ಎಳೆದೊಯ್ದು ಪರಾರಿಯಾಗಿದೆ.
ಚಿರತೆ ಶಬ್ದಕ್ಕೆ ನಾಯಿ ಚಿರತೆ ಬಳಿ ತೆರಳಿರುವ ವಿಡಿಯೋ ಜಯಣ್ಣ ಅವರು ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನಾಯಿಯನ್ನು ಚಿರತೆ ಎಳೆದೊಯ್ದಿದೆ. ಆದರೆ ಚಿರತೆ ಸೆರೆಯಾಗಿಲ್ಲ.
ಈ ಕುರಿತಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಯಾರೋಬ್ಬರು ಸ್ಥಳಕ್ಕೆ ಭೇಟಿ ನೀಡದೆ ಹೋಗಿದ್ದು, ಗ್ರಾಮಸ್ಥರ ಆತಂಕ ಹೆಚ್ಚಿಸಿದೆ ಎಂದು ಯುವ ಮುಖಂಡ ಪುನೀತ್ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಚಿರತೆ ಸೆರೆಗೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.