ಬೆಂಗಳೂರು ಗ್ರಾಮಾಂತರ ಜಿಲ್ಲೆ: ಕರ್ನಾಟಕ ಜೀವವೈವಿದ್ಯ ಮಂಡಳಿ, ಬೆಂಗಳೂರು ರವರಿಂದ ಗ್ರಾಮಪಂಚಾಯಿತಿ ಮಟ್ಟದ ಜೀವ ವೈವಿದ್ಯ (Biodiversity) ನಿರ್ವಹಣಾ ಸಮಿತಿಗಳ ಕಾರ್ಯಚಟುವಟಿಕೆ ಕುರಿತು ಒಂದು ದಿನದ ಕಾರ್ಯಾಗಾರವನ್ನು ದೇವನಹಳ್ಳಿಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಇಂದು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಾಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ ಕರ್ನಾಟಕ ಜೀವವೈವಿದ್ಯ ಮಂಡಳಿಯ ತೋಟಗಾರಿಕಾ ಉಪನಿರ್ದೇಶಕಿ ಪವಿತ್ರ.ಕೆ., ಗ್ರಾಮಪಂಚಾಯಿತಿಗಳ ಹಂತದಲ್ಲಿ ಹಾಗೂ ತಾಲ್ಲೂಕು ಹಂತದಲ್ಲಿರುವ ಜೀವ ವೈವಿದ್ಯ ನಿರ್ವಹಣಾ ಸಮಿತಿಗಳು ಸಕ್ರಿಯವಾಗುವ ಮೂಲಕ, ಜೀವವೈವಿದ್ಯತೆ ಸಂರಕ್ಷಣೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ, ಜೀವವೈವಿದ್ಯತೆ ಕುರಿತು ಇರುವ ಕಾನೂನುಗಳು ಹಾಗೂ ಗ್ರಾಮಪಂಚಾಯಿತಿ ಮಟ್ಟದ ಸಮತಿಗಳ ಅಧಿಕಾರಿಗಳ ಕುರಿತು ಅರಿವು ಮೂಡಿಸಲು ಕರ್ನಾಟಕ ಜೀವವೈವಿದ್ಯ ಮಂಡಳಿಯಿಂದ ಈ ಕಾರ್ಯಾಗಾರವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಸನ್ನ.ಕೆ.ಆರ್ ಮಾತನಾಡಿ, ಪ್ರತಿಯೊಂದು ಗ್ರಾಮಪಂಚಾಯಿತಿಯಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷರೇ ಅಧ್ಯಕ್ಷರಾಗಿರುವ ಗ್ರಾಮಪಂಚಾಯಿತಿ ಮಟ್ಟದ ಜೀವ ವೈವಿದ್ಯ ನಿರ್ವಹಣಾ ಸಮಿತಿ ಕಡ್ಡಾಯವಾಗಿ ರಚಿಸಬೇಕಾಗಿದ್ದು, ಈ ಸಮಿತಿಯಲ್ಲಿ ಕನಿಷ್ಟ 07 ಜನ ಮತ್ತು ಗರಿಷ್ಠ 11 ಜನ ಸದಸ್ಯರು ಇರಲು ಅವಕಾಶವಿದೆ.
ಈ ಸಮಿತಿಗೆ ಗ್ರಾಮಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿಅಧಿಕಾರಿಗಳೇ ಸದಸ್ಯ ಕಾರ್ಯದರ್ಶಿಗಳಾಗಿದ್ದು, ವರ್ಷದಲ್ಲಿ ಕನಿಷ್ಠ 04 ಸಭೆಗಳನ್ನು ನಡೆಸುವ ಮೂಲಕ ಗ್ರಾಮಪಂಚಾಯಿತಿ ಮಟ್ಟದಲ್ಲಿರುವ ಪ್ರಾಣಿ-ಪಕ್ಷಿಗಳು, ಗಿಡ-ಮರ ಒಳಗೊಂಡು ಒಟ್ಟಾರೆ ಪರಿಸರದ ಸಂರಕ್ಷಣೆಗೆ ನಿರ್ದಿಷ್ಟ ಕ್ರಿಯಾಯೋಜನೆಗಳನ್ನು ರೂಪಿಸಿಕೊಂಡು ಜೀವ ವೈವಿದ್ಯತೆ ಶ್ರಮಿಸಬೇಕೆಂದರು.
ಕಳೆ ನಾಶಕಗಳ ಬಳಕೆ ಕಡಿಮೆ ಮಾಡಿ, ಸಾವಯವ ಕೃಷಿಯತ್ತ ಮುಂದಿನ ಜಗತ್ತು ಸಾಗಬೇಕಾದ ಅಗತ್ಯತೆ ಇದೆ ಎಂದು ತಿಳಿಸಿದರು. ಮಾವನ ಸಂಕುಲದ ಉಳಿವಿಗಾಗಿ ಜೀವ ವೈವಿದ್ಯತೆ ರಕ್ಷಣೆ ಅಗತ್ಯತೆ ಕುರಿತು ವಿವರವಾದ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಸ್.ಶ್ರೀನಾಥಗೌಡ ಮಾತನಾಡಿ, ದೇವನಹಳ್ಳಿ ತಾಲ್ಲೂಕಿನಲ್ಲಿ ನಲ್ಲೂರು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ 13ನೇ ಶತಮಾನದಲ್ಲಿ ಚೋಳರ ಅಳ್ವಿಕೆ ಕಾಲದಲ್ಲಿ ನೆಡಲಾಗಿದ್ದ ಹುಣಸೇತೋಪನ್ನು ಕರ್ನಾಟಕ ಜೀವವೈವಿದ್ಯ ಮಂಡಳಿಯವರು 2007 ರಲ್ಲಿ ಜೀವ ವೈವಿದ್ಯ ಪಾರಂಪರಿಕ ತಾಣ ಎಂಬುದಾಗಿ ಘೋಷಿಸಿದ್ದು, ಈ ರೀತಿ ಘೋಷಿಸಿದ ದೇಶದ ಪ್ರಥಮಸ್ಥಳ ಎಂಬುದು ತಮ್ಮಲ್ಲೇರ ಹೆಮ್ಮೆಯಾಗಿದೆ.
ಈ ಕಾರ್ಯದ ಮುಂದುವರೆದ ಭಾಗವಾಗಿ ದೇವನಹಳ್ಳಿ ಚಕ್ಕೊತಾ ತಳಿಯ ಸರಂಕ್ಷಣೆ ಮಾಡುವ ನಿಟ್ಟಿನಲ್ಲಿ ಈಗಾಗಲೇ ಕ್ರಿಯಾಯೋಜನೆ ಅನುಮೋದನೆಯನ್ನು ಪಡೆದುಕೊಂಡಿದ್ದು, ಚಕ್ಕೊತಾ ಸಸಿಗಳನ್ನು ಉಚಿತವಾಗಿ ವಿತರಿಸುವ, ಜೇನು ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವ ಜೊತೆಗೆ ಸಾವಯವ ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಕಾರ್ಯಾಗಾರದಲ್ಲಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೆಶಕರಾದ ದುರ್ಗಪ್ಪ, ಅಮರನಾರಾಯಣ್ ಸೇರಿದಂತೆ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಕೃಷಿ , ತೋಟಗಾರಿಕೆ, ರೇಷ್ಮೆ, ಅರಣ್ಯ ಒಳಗೊಂಡು ಅನುಷ್ಠಾನ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.