ಬೆಂಗಳೂರು: ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಭಾಗವಾಗಿ ‘ಮನೆ ಮನೆಗೆ ಪೊಲೀಸ್’ (MANE MANE GE POLICE) ಎಂಬ ವಿನೂತನ ಕಾರ್ಯಕ್ರಮವನ್ನು ರಾಜ್ಯ ಗೃಹ ಇಲಾಖೆ ಇಂದಿನಿಂದ ಹಮ್ಮಿಕೊಂಡಿದೆ.
ಶುಕ್ರವಾರ ಬೆಳಗ್ಗೆ 10.30ಕ್ಕೆ ಗೋವಿಂದರಾಜನಗರ ವಾರ್ಡ್ ನಲ್ಲಿರುವ ಎಂ.ಸಿ ಲೇಔಟ್ನಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್, ಡಿಜಿ-ಐಜಿಪಿ, ಡಾ.ಎಂ.ಎ ಸಲೀಂ, ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು ಚಾಲನೆ ನೀಡಲಿದ್ದಾರೆ.
‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮದಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಮುಕ್ತವಾಗಿ ಮಹಿಳೆಯರ ಸಮಸ್ಯೆಯನ್ನು ಬೀಟ್ ಗಳಲ್ಲಿಯೇ ಆಲಿಸಲಿದ್ದಾರೆ.
ನಾಳೆಯಿಂದ, 'ಮನೆ ಮನೆಗೆ ಪೊಲೀಸ್' ಕಾರ್ಯಕ್ರಮವು ನಿಮ್ಮ ರಕ್ಷಕರನ್ನು, ನಿಮ್ಮ ಮನೆ ಬಾಗಿಲಿಗೆ ಕರೆ ತರುತ್ತಿದೆ. ನಾವು ನಿಮ್ಮ ಸಮಸ್ಯೆಯನ್ನು ಆಲಿಸಲಿದ್ದೇವೆ, ಕಾಳಜಿವಹಿಸುತ್ತಿದ್ದೇವೆ ಮತ್ತು ನೀವಿರುವ ಸ್ಥಳದಲ್ಲೇ ಬಂದು ಕಾರ್ಯನಿರ್ವಹಿಸಲಿದ್ದೇವೆ.#ManeManegePolice #PoliceAtYourDoor #YourVoiceMatters #PoliceForPeople… pic.twitter.com/pAur57DuZC
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) July 17, 2025
ಮಹಿಳೆ ಮತ್ತು ಮಕ್ಕಳ ಸುರಕ್ಷತೆ ಖಾತ್ರಿ ಪಡಿಸಿ ಸುರಕ್ಷಿತ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡಲಿದ್ದು, ಕೌಟುಂಬಿಕ ದೌರ್ಜನ್ಯ ವಿರುದ್ಧ ಜಾಗೃತಿ ಮತ್ತು ಕಾನೂನಿನ ಅರಿವು ಮೂಡಿಸಲಿದ್ದಾರೆ.
ಪೊಲೀಸ್ ಸೇವೆಗಳ ಪ್ರತಿಯೊಂದು ಸ್ತರದಲ್ಲೂ ಸಾರ್ವಜನಿಕರ ಬೆಂಬಲ ಮತ್ತು ಸಹಭಾಗಿತ್ವ ಸಾಧಿಸಿಕೊಳ್ಳುವುದರಿಂದ ಮಾತ್ರವೇ ಉತ್ಕೃಷ್ಟ ಸೇವೆಯನ್ನು ಒದಗಿಸಲು ಸಾಧ್ಯ.
ಈ ನಿಟ್ಟಿನಲ್ಲಿ ಈಗಾಗಲೇ ಪ್ರತಿಯೊಂದು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸಬ್-ಬೀಟ್ಗಳನ್ನಾಗಿ ವಿಂಗಡಿಸಿ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ.
ಇನ್ನು ಮುಂದೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಮನೆ ಮನೆಗೂ ಭೇಟಿ ನೀಡಿ ಸಾರ್ವಜನಿಕರ ದೂರುಗಳನ್ನು ಆಲಿಸಿ, ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಕಲ್ಪಿಸಲು ಪ್ರಯತ್ನಿಸಲಿದ್ದಾರೆ.
ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು. ಅಪರಾಧಗಳನ್ನು ತಡೆಗಟ್ಟುವುದು, ಅಪರಾಧಗಳನ್ನು ಪತ್ತೆಹಚ್ಚುವುದು, ಸಮಾಜದಲ್ಲಿ ನಿರ್ಭಯ ವಾತಾವರಣವನ್ನು ಸೃಷ್ಟಿಸುವ ಜೊತೆಗೆ ರಕ್ಷಣೆ ಮತ್ತು ಸುರಕ್ಷತೆ ಒದಗಿಸುವ ಗುರುತರವಾದ ಜವಾಬ್ದಾರಿಗಳು ಪೊಲೀಸ್ ಇಲಾಖೆಯ ಮೇಲಿವೆ. ಅಂಜಿಕೆ ಇಲ್ಲದೆ ಮುಕ್ತ ಮನಸ್ಸಿನೊಂದಿಗೆ ಸಮಸ್ಯೆಗಳನ್ನು ಪೊಲೀಸರೊಂದಿಗೆ ಹಂಚಿಕೊಳ್ಳಬಹುದಾಗಿದೆ.
ಮುಂಜಾನೆ-ಸಂಜೆ ಪೊಲೀಸ್ ಕಾಲ್ನಡಿಗೆ ಗಸ್ತು
ನಗರದಾದ್ಯಂತ ಮುಂಜಾನೆ ಹಾಗೂ ಸಾಯಂಕಾಲದ ವೇಳೆಯಲ್ಲಿ ಪೊಲೀಸರು ಕಾಲ್ನಡಿಗೆ ಮೂಲಕವೇ ಗಸ್ತು ಕರ್ತವ್ಯ ನಿರ್ವಹಿಸಬೇಕು ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಈಗಾಗಲೇ ಪೊಲೀಸರಿಗೆ ಸೂಚನೆ ನೀಡಿದ್ದು, ಈ ಬಗ್ಗೆ ಸಾರ್ವಜನಿಕ ವಲಯದಲ್ಲೂ ಮೆಚ್ಚುಗೆ ವ್ಯಕ್ತವಾಗಿತ್ತು.
ಸಾರ್ವಜನಿಕರ ನಂಬಿಕೆಯನ್ನು ಬಲಪಡಿಸಲು ಮತ್ತು ಪೊಲೀಸ್ ಉಪಸ್ಥಿತಿ ಹೆಚ್ಚಿಸಲು ಬೀಟ್ ಸಿಬ್ಬಂದಿಯೊಂದಿಗೆ ಹೋಯ್ಸಳ, ಚೀತಾ ವಾಹನದ ಸಿಬ್ಬಂದಿ, ಸಬ್ ಇನ್ಸ್ಪೆಕ್ಟರ್ಗಳು ಅವರವರ ಠಾಣಾ ವ್ಯಾಪ್ತಿಯಲ್ಲಿ ಕಾಲ್ನಡಿಗೆ ಮೂಲಕ ಗಸ್ತು ಕರ್ತವ್ಯ ನಿರ್ವಹಿಸಲು ಈಗಾಗಲೇ ಆರಂಭಿಸಿದ್ದು, ಅದರಿಂದ ಆನೇಕ ಜನರಿಗೆ ಸಹಾಯಕವಾಗಲಿದೆ.

