ದೊಡ್ಡಬಳ್ಳಾಪುರ: ತಾಲೂಕಿನ ಹುಲಿಕುಂಟೆ ಸಮೀಪದ ಹುಲುಕಡಿ ಬೆಟ್ಟದ ತಪ್ಪಲಿನಲ್ಲಿ ಜಿಕೆವಿಕೆ (GKVK) ಕೃಷಿ ವಿಶ್ವವಿದ್ಯಾನಿಲಯದ ಇಂಜಿನಿಯರ್ ವಿದ್ಯಾರ್ಥಿಗಳ ವತಿಯಿಂದ ಎನ್ಎಸ್ಎಸ್ ಶಿಬಿರವನ್ನು ಆಯೋಜಿಸಲಾಗಿದೆ.
ಈ ಶಿಬಿರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಡಾ.ಎಂ.ಬಿ.ನವೀನ್ ಕುಮಾರ್ ಅವರು ಕಾನೂನು ಅರಿವು ಮೂಡಿಸಿದರು.

ಮಾದಕ ವಸ್ತುಗಳ ಸೇವೆನೆಯಿಂದಾಗಿ ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ. ದುಷ್ಕರ್ಮಿಗಳು ವಿದ್ಯಾರ್ಥಿಗಳ ಅಮಾಯಕತೆಯನ್ನು ಉಪಯೋಗಿಸಿಕೊಂಡು ಅವರನ್ನು ಮಾದಕ ವಸ್ತುಗಳ ಜಾಲಕ್ಕೆ ಕೆಡವುತ್ತಿದ್ದಾರೆ. ಇಂತಹ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿಗಳು ನಿಗಾ ವಹಿಸಬೇಕು. ಇಂತಹ ಚಟುವಟಿಕೆಗಳು ಕಂಡು ಬಂದರೆ ಪೊಲೀಸರಿಗೆ ತಿಳಿಸಬೇಕು.
ವಿದ್ಯಾರ್ಥಿಗಳು ಸದಾ ಪೊಲೀಸ್ ಇಲಾಖೆಯ ತುರ್ತು ಸೇವೆ ನಂಬರ್ ಗಳನ್ನು ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ಅನಾಹುತಗಳು ನಡೆದಾಗ ಪೊಲೀಸರಿಗೆ ದೂರವಾಣಿ ಮೂಲಕ ಕರೆ ಮಾಡಬೇಕು. ಕರೆ ಮಾಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.
ಕೆಲ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳು ಇತ್ತೀಚಿನ ದಿನಗಳಲ್ಲಿ ಮೋಟಾರ್ ಬೈಕ್ ಮತ್ತಿತರ ವಾಹನಗಳನ್ನು ಚಲಾವಣೆ ಮಾಡುತ್ತಿರುವುದು ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿದೆ. ಅಕಸ್ಮಾತ್ ಅಪಘಾತ ಸಂಭವಿಸಿದರೆ, ವಿದ್ಯಾರ್ಥಿಗಳ ಪೋಷಕರು ದೊಡ್ಡ ಅಪಾಯಕ್ಕೆ ಮತ್ತು ಆರ್ಥಿಕ ನಷ್ಟಕ್ಕೆ ಕಾರಣವಾಗಬೇಕಾಗುತ್ತದೆ.
ಸರ್ಕಾರ ನಿಗದಿ ಪಡಿಸಿದ ವಾಹನ ಪರವಾನಿಗೆಯನ್ನು ಪಡೆದುಕೊಂಡ ನಂತರವಷ್ಟೇ ವಾಹನ ಚಲಾಯಿಸಬೇಕು. ಮೂರು ಮಂದಿ ಬೈಕ್ ನಲ್ಲಿ ಕುಳಿತುಕೊಳ್ಳುವುದು, ವೀಲಿಂಗ್ ಮಾಡುವುದು ಅಪರಾಧ. ಇಂತಹ ಕ್ರಿಯೆಗಳಿಗೆ ದಂಡ ವಿಧಿಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರು.
ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಮಾಡಿ ಸಮಾಜಕ್ಕೆ ಉತ್ತಮ ಕಾಣಿಕೆ ನೀಡಬೇಕು. ವಿದ್ಯಾವಂತ ಸಮಾಜವನ್ನು ಕಟ್ಟಲು ವಿದ್ಯಾರ್ಥಿಗಳು ಬುನಾದಿಯಾಗುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ಕೆಲ ಕಡೆ ಅಪ್ರಾಪ್ತ ವಯಸ್ಸಿನವರಿಗೆ ಮದುವೆ ಮಾಡುತ್ತಿರುವುದು ಕೂಡ ಗಮನಕ್ಕೆ ಬಂದಿದೆ. ಕಾನೂನು ರೀತಿಯಲ್ಲಿ ಬಾಲ್ಯ ವಿವಾಹ ಅಪರಾಧ. ಬಾಲ್ಯ ವಿವಾಹ ಮಾಡುವ ಪೋಷಕರು ಅಪರಾಧಿಗಳಾಗುತ್ತಾರೆ. ಅವರ ವಿರುದ್ಧ ಪ್ರಕರಣ ದಾಖಲು ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಶಿಬಿರ ಸಂಯೋಜನ ಅಧಿಕಾರಿ ಡಾ.ಜಯಶ್ರೀ, ಎಎಸ್ಐ ಕೃಷ್ಣಪ್ಪ, ಗಂಗಾಧರ್ ಮತ್ತಿತರರು ಇದ್ದರು.