ದೊಡ್ಡಬಳ್ಳಾಪುರ: ಕೆರೆಯಲ್ಲಿ ಮೀನು ಹಿಡಿಯಲು (Fishing) ಗೆಳೆಯರೊಂದಿಗೆ ತೆರಳಿದ್ದ ಚಾಲಕನೋರ್ವ ನೀರಲ್ಲಿ ಮುಳುಗಿದ್ದು, ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾವನಪ್ಪಿರುವ ಘಟನೆ ತಾಲೂಕಿನ ತಿಪ್ಪಗಾನಹಳ್ಳಿ ಕೆರೆಯಲ್ಲಿ ಸಂಭವಿಸಿದೆ.
ಮೃತ ದುರ್ದೈವಿಯನ್ನು ಕಾರನಾಳ ಗ್ರಾಮದ 22 ವರ್ಷದ ಮುರುಳಿ ಎಂದು ಗುರುತಿಸಲಾಗಿದೆ.
ಚಾಲಕ ವೃತ್ತಿ ಮಾಡುತ್ತಿದ್ದ ಮೃತ ಮುರುಳಿ, ಇಂದು ಗೆಳೆಯರು ಹಾಗೂ ಸಹೋದರನೊಂದಿಗೆ ತಿಪ್ಪಗಾನಹಳ್ಳಿ ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದಾನೆ. ಈ ವೇಳೆ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಇದನ್ನು ಕಂಡ ಗೆಳೆಯರು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾವನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ದೇಹವನ್ನು ಶವಾಗಾರದಲ್ಲಿ ಇರಿಸಲಾಗಿದೆ.