ಭಾರತ ದೇಶ ದೇವಾಲಯಗಳ ನಾಡು. ಇಲ್ಲಿ ಸಕಲ ಚರಾಚರ ಸೃಷ್ಠಿಗೆ ಕಾರಣೀಭೂತರಾದ ದೇವಾನು ದೇವತೆಗಳನ್ನು ನಾವು ನಿತ್ಯವೂ ಪೂಜಿಸುತ್ತೇವೆ.
ಹಿಂದೂ ಶಾಸ್ತ್ರಗಳ ಪ್ರಕಾರ ಎಲ್ಲಾ ದೇವರುಗಳಿಗೂ ದೇವಾಲಯಗಳಿವೆ. ಆದರೆ, ಒಬ್ಬ ಬ್ರಹ್ಮನಿಗೆ ಮಾತ್ರ ಈ ಭೂಮಿಯಮೇಲೆ ದೇವಾಲಯಗಳಿಲ್ಲ ಕಾರಣವೇನು.? ಬ್ರಹ್ಮನಿಗೆ ಭೂಲೋಕದಲ್ಲಿ ಯಾಕೆ ಪೂಜೆ ನಡೆಯುವುದಿಲ್ಲ? ಇದರ ಬಗ್ಗೆ ಪುರಾಣಗಳು ಏನು ಹೇಳುತ್ತವೆ? ಎಂಬುವುದನ್ನು ತಿಳಿದುಕೊಳ್ಳೋಣ ಬನ್ನಿ.
ಪುರಾಣಗಳ ಪ್ರಕಾರ-ಭೃಗು ಮಹರ್ಷಿ ಶಾಪ
ಒಮ್ಮೆ ಲೋಕ ಕಲ್ಯಾಣಕ್ಕಾಗಿ ಯಜ್ಞವನ್ನು ಆಚರಿಸಲು ಮಹರ್ಷಿಗಳು ನಿರ್ಣಯಿಸಿದರು. ತ್ರಿಮೂರ್ತಿಗಳಲ್ಲಿ ಯಾರು ಹೆಚ್ಚೆಂದು ತಿಳಿಯಲು ಭೃಗು ಮಹರ್ಷಿಯನ್ನು ಕಳುಹಿಸಿದರು! ಭೃಗು ಮಹರ್ಷಿ ಮೊದಲಿಗೆ ಸತ್ಯ ಲೋಕಕ್ಕೆ ಹೋಗುತ್ತಾನೆ.
ಆ ಸಮಯದಲ್ಲಿ ಬ್ರಹ್ಮ ದೇವ ವೇದಗಾನವನ್ನು ಮಾಡುತ್ತಿದ್ದರೆ, ಆತನ ಸ್ವರಕ್ಕೆ ಸರಸ್ವತೀ ದೇವಿ ವೀಣೆಯನ್ನು ನುಡಿಸುವುದರಲ್ಲಿ ತಲ್ಲೀನಳಾಗಿರುತ್ತಾಳೆ. ಭೃಗು ಮಹರ್ಷಿಯ ಆಗಮನವನ್ನು ಗಮನಿಸದೆ ಸಂಗೀತದಲ್ಲಿ ಮಗ್ನರಾಗಿರುತ್ತಾರೆ.
ಇದರಿಂದ ಕುಪಿತನಾದ ಭೃಗು , ಕಲಿಯುಗದಲ್ಲಿ ಭೂಲೋಕದಲ್ಲಿ ನಿನಗೆ ಪೂಜೆಗಳು ನಡೆಯದಿರಲಿ ಎಂದು ಶಪಿಸುತ್ತಾನೆ. ಆದುದರಿಂದಲೆ ಬ್ರಹ್ಮನಿಗೆ ಈ ಭೂಲೋಕದಲ್ಲಿ ದೇವಾಲಯಗಳು ಇಲ್ಲ ಹಾಗೂ ಪೂಜೆಗಳೂ ಇಲ್ಲವೆಂದು ಹೇಳುತ್ತಾರೆ.
ಬ್ರಹ್ಮನಿಗಿರುವುದು ಒಂದೇ ಆಲಯ, ಬ್ರಹ್ಮ ಪುಷ್ಕರಿಣಿ: ರಾಜಸ್ಥಾನ್ ನ ಅಜ್ಮೀರ್ ಪಟ್ಟಣದ ವಾಯುವ್ಯ ಬಾಗದಲ್ಲಿ ಸುಮಾರು 10 ಕಿಲೋ ಮೀಟರ್ ದೂರದಲ್ಲಿರುವ ಪುಷ್ಕರ್ ಬಳಿ ಇರುವ “ಗಾಯತ್ರಿ ಗಿರಿ” ಯಲ್ಲಿರುವ ಶಕ್ತಿ ಪೀಠವಿದೆ. ಇದನ್ನೇ “ಬ್ರಹ್ಮ ಪುಷ್ಕರಿಣಿ” ಎಂದೂ ಸಹ ಕರೆಯುತ್ತಾರೆ.
ಅಮ್ಮನವರ ಕಂಠಾಭರಣ ಇಲ್ಲಿಯೇ ಬಿದ್ದಿತೆಂದು ಭಕ್ತರ ನಂಬಿಕೆ. ಇಲ್ಲಿ ಗಾಯತ್ರಿ ದೇವಿ ನೆಲೆನಿಂತಿದ್ದಾಳೆ.ನಿತ್ಯವೂ ಹೋಮ ,ಹವನ, ಪೂಜೆಗಳು ನಡೆಯುತ್ತವೆ. ಈ ನದಿಯ ದಡದಲ್ಲಿ ಬ್ರಹ್ಮ ದೇವನ ಆಲಯವಿದೆ.
ಪ್ರಪಂಚದಲ್ಲೇ ಬ್ರಹ್ಮ ದೇವನಿಗಿರುವ ಏಕೈಕ ಆಲಯವಿದು. ನಮ್ಮ ದೇಶದಲ್ಲಿ ಅತೀಮುಖ್ಯ ತೀರ್ಥಕ್ಷೇತ್ರವಾಗಿ ಪ್ರಸಿದ್ಧಿಯಾಗಿದೆ. ಆದುದರಿಂದಲೇ ಇದಕ್ಕೆ “ತೀರ್ಥ ರಾಜ್” ಎಂಬ ಹೆಸರು ಸಾರ್ಥಕವಾಗಿದೆ.
ಪದ್ಮ ಪುರಾಣದ ಪ್ರಕಾರ: ಪದ್ಮ ಪುರಾಣದಲ್ಲಿ ವಜ್ರನಾಭ ಎಂಬ ಹೆಸರಿನ ರಾಕ್ಷಸ ಪ್ರಜೆಗಳನು ಹಿಂಸಿಸುತ್ತಿದ್ದ. ಇದನ್ನು ನೋಡಲಾಗದೆ, ತನ್ನ ಕೈಯಲ್ಲಿರುವ ತಾವರೆ ಹೂವನ್ನೇ ಆಯುಧವನ್ನಾಗಿಸಿಕೊಂಡು ಆ ರಾಕ್ಷಸನನ್ನು ಬ್ರಹ್ಮ ದೇವ ಸಂಹರಿಸಿದ.
ಆ ಸಮಯದಲ್ಲಿ ಹೂವಿನ ದಳಗಳು ಮೂರು ಕಡೆ ಬಿದ್ದು ಮೂರು ಸರೋವರಗಳಾದವು. ಅವುಗಳನ್ನು ಜ್ಯೇಷ್ಠ ಪುಷ್ಕರ್, ಮಧ್ಯ ಪುಷ್ಕರ್, ಕನಿಷ್ಠ ಪುಷ್ಕರ್ ಎಂದು ಕರೆಯುತ್ತಾರೆ.
ಬ್ರಹ್ಮನ ಕೈಯಿಂದ ತಾವರೆ ಹೂವಿನ ದಳಗಳು ಜಾರಿ ಬಿದ್ದ ಪ್ರದೇಶಕ್ಕೆ ‘ಪುಷ್ಕರ್’ ಎಂಬ ಹೆಸರು ಅರ್ಥಪೂರ್ಣವಾಗಿದೆ. ಆದರೆ, ಅಲ್ಲಿಯ ಪ್ರಜೆಗಳು ಹೇಳುವ ಪ್ರಕಾರ ಸರಸ್ವತೀ ದೇವಿಯ ಸಮ್ಮುಖದಲ್ಲೇ ಶಿವ, ವಿಷ್ಣು ಸೇರಿ ಬ್ರಹ್ಮನಿಗೆ ಗಾಯತ್ರಿ ಎಂಬ ಕನ್ಯೆಯೊಂದಿಗೆ ವಿವಾಹ ಮಾಡಿಸುತ್ತಾರೆ. ಇದನ್ನು ಸಹಿಸಲಾರದ ಸರಸ್ವತೀ ದೇವಿ ಬ್ರಹ್ಮನನ್ನು ಮುದುಕನಾಗುವಂತೆ ಶಪಿಸುತ್ತಾಳೆ.!
ಸಂಗ್ರಹ ವರದಿ: ಗಣೇಶ್ ಎಸ್.