ದೊಡ್ಡಬಳ್ಳಾಪುರ (Doddaballapura); ನಗರದ ಸಮಗ್ರ ಅಭಿವೃದ್ಧಿಗೆ ಬುನಾದಿಯನ್ನು ಹಾಕಿದವರು ಲೋಕಸೇವಾನಿರತ ಡಿ.ಕೊಂಗಾಡಿಯಪ್ಪನವರು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್ ತಿಳಿಸಿದರು.
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಡಾ.ರಾಜ್ ಕುಮಾರ್ ಕಲಾಮಂದಿರದಲ್ಲಿ ನಡೆದ ಲೋಕಸೇವಾನಿರತ ಡಿ.ಕೊಂಗಾಡಿಯಪ್ಪ ಅವರ 164 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ದೊಡ್ಡಬಳ್ಳಾಪುರ ಅಭಿವೃದ್ಧಿಯನ್ನು ಪ್ರಧಾನವಾಗಿ ಚಿಂತಿಸುತ್ತಿದ್ದ, ಮೈಸೂರು ಮಹಾರಾಜರಿಂದ ಅಭಿವೃದ್ಧಿ ಕಾರ್ಯಗಳನ್ನು ಸಕಾರಗೊಳಿಸಿಕೊಳ್ಳುತ್ತಿದ್ದ ಕೊಂಗಾಡಿಯಪ್ಪ ಅವರು ಸ್ವಾತಂತ್ರ್ಯ ಚಳುವಳಿಯಿಂದ ದೂರ ಉಳಿದ್ದರು ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರಾಗಿ ತಮ್ಮ ಸೇವಾ ಮನೋಭಾವದಿಂದ ಸರ್ವಜನ ಮಾನ್ಯರಾಗಿದ್ದ ಕೊಂಗಾಡಿಯಪ್ಪ ಅವರು ಮೈಸೂರು ಮಹಾರಾಜರಿಂದ ದೊಡ್ಡಬಳ್ಳಾಪುರಕ್ಕೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಿದರು.
ವಿದ್ಯುತ್, ಆಸ್ಪತ್ರೆ, ಸರ್ಕಾರಿ ಶಾಲೆ, ಕುಡಿಯುವ ನೀರು, ಕೈಗಾರಿಕಾ ತರಬೇತಿ ಕೇಂದ್ರ ಮುಂತಾದವರುಗಳನ್ನು ಮೈಸೂರು ಮಹಾರಾಜರಿಂದ ಮಂಜೂರು ಮಾಡಿಸಿದರು.
ಸೇವಾಮನೋಭಾವದಿಂದ ಜನಮನ್ನಣೆಯೊಂದಿಗೆ ಮೈಸೂರು ಮಹಾರಾಜರಿಂದ ಲೋಕಸೇವಾ ನಿರತ ಎಂಬ ಬಿರುದಿಗೆ ಪುರಸ್ಕೃತರಾದರು ಎಂದರು.
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಎ.ಜಯರಾಮ ಮಾತನಾಡಿ, ಪ್ರತಿಯೊಬ್ಬರಿಗೂ ಶಿಕ್ಷಣ ದೊರೆಯಬೇಕೆಂದು ಅರಿತಿದ್ದ ಮತ್ತು ಶಿಕ್ಷಕರೂ ಆಗಿದ್ದ ಕೊಂಗಾಡಿಯಪ್ಪ ಅವರು ಎಲ್ಲಾ ವರ್ಗದ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿದ್ದರು.
ಅವರ ಮನೆ ವಿದ್ಯಾರ್ಥಿನಿಲಯದಂತೆ. ಬಡ ವಿದ್ಯಾರ್ಥಿಗಳು ಅವರ ಮನೆಯಲ್ಲಿದ್ದು ವಿದ್ಯಾಭ್ಯಾಸ ಮಾಡುತ್ತಿದ್ದರು. ವಯಸ್ಕರ ಶಿಕ್ಷಣ ಶಾಲೆಯನ್ನು ಸಹ ನಡೆಸುತ್ತಿದ್ದರು. ಬೇರೆ ಊರಿನ ವಿದ್ಯಾರ್ಥಿಗಳು ಸಹ ಈ ಸಹಾಯ ಪಡೆಯುತ್ತಿದ್ದರು.
ಕೊಂಗಾಡಿಯಪ್ಪನವರು ತಮ್ಮ ವಿದ್ಯಾರ್ಥಿಗಳೊಂದಿಗೆ ಸೇರಿ ರಸ್ತೆಯ ಬದಿಯಲ್ಲಿ ಮರಗಳನ್ನು ಬೆಳೆಸುವ ಮೂಲಕ ಪರಿಸರ ಜಾಗೃತಿಯನ್ನು ಜನರಲ್ಲಿ ಮೂಡಿಸುತ್ತಿದ್ದರು.
ಕನ್ನಡ ಸಾಹಿತ್ಯ ಪರಿಷತ್ತು ಕಸಬಾ ಹೋಬಳಿ ಘಟಕದ ಕೋಶಾಧ್ಯಕ್ಷ ಜಿ.ಸುರೇಶ್ ಮಾತನಾಡಿ, ಕೊಂಗಾಡಿಯಪ್ಪ ಅವರು ದೊಡ್ಡಬಳ್ಳಾಪುರದಲ್ಲಿ ಮೈಸೂರು ಸಂಸ್ಥಾನಕ್ಕೆ ಮಾದರಿಯಾದ ಸ್ಕೌಟ್ ಗ್ರೂಪ್ ಸ್ಥಾಪಿಸಿದ್ದರು. ಗ್ರಾಮೀಣ ವಿದ್ಯಾರ್ಥಿಗಳಿಗೆ ಕೊಂಗಾಡಿಯಪ್ಪನವರು ತಮ್ಮ ಮನೆಯಲ್ಲಿ ಉಳಿದುಕೊಳ್ಳಲು ಅವಕಾಶ ಕಲ್ಪಿಸಿದ್ದರು.
ಕೊಂಗಾಡಿಯಪ್ಪನವರ ಈ ಜನೋಪಯೋಗಿ ಮತ್ತು ಸೇವಾ ಕಾರ್ಯಗಳನ್ನು ಪರಿಗಣಿಸಿದ ಮೈಸೂರು ಮಹಾರಾಜರು 1918ರಲ್ಲಿ ಸಾರ್ವಜನಿಕ ಸೇವಾ ಪದಕ ಮತ್ತು 1931 ರಲ್ಲಿ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಲೋಕಸೇವಾನಿರತ ಎಂಬ ಬಿರುದು ನೀಡಿ ಗೌರವಿಸಿದರು ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ ಸಹಾಯಕ ಆಯುಕ್ತ ವೆಂಕಟರಾಜು, ನಿವೃತ್ತ ಮುಖ್ಯ ಶಿಕ್ಷಕ ಕೆ.ವಿ.ವೆಂಕಟೇಶರೆಡ್ಡಿ, ಕನ್ನಡ ಜಾಗೃತ ವೇದಿಕೆ ಜಿಲ್ಲಾ ಅಧ್ಯಕ್ಷ ನಾಗರಾಜು, ತಾಲ್ಲೂಕು ಅಧ್ಯಕ್ಷ ಶಶಿಕುಮಾರ್, ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ.ಗೋವಿಂದರಾಜು.
ಸಂಘಟನಾ ಕಾರ್ಯದರ್ಶಿ ಆರ್.ಗೋವಿಂದರಾಜು, ಸಾಸಲು ಹೋಬಳಿ ಘಟಕ ಅಧ್ಯಕ್ಷ ಜಿ.ಎಂ.ನಾಗರಾಜು ಪ್ರತಿನಿಧಿಗಳಾದ ಷಪೀರ್, ಕೋದಂಡರಾಮ್, ಕಲಾವಿದ ದರ್ಗಾಜೋಗಿಹಳ್ಳಿ ಮಲ್ಲೇಶ್ ಮೊದಲಾದವರು ಭಾಗವಹಿಸಿದ್ದರು.