Daily story; ಒಂದು ಹಳ್ಳಿ. ಅಲ್ಲಿ ಹೆಚ್ಚು – ಕಡಿಮೆ ಎಲ್ಲ ಬಡ ಕುಟುಂಬಗಳೇ ಇದ್ದವು. ಒಂದು ಮಾತ್ರ ಶ್ರೀಮಂತ ಕುಟುಂಬವಿತ್ತು. ಈ ಕುಟುಂಬದ ಯಜಮಾನ ಬಡ ಕುಟುಂಬಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ಗರ್ವದಿಂದ ಮೆರೆಯುತ್ತಿದ್ದನು.
ಇವನಿಗೆ ಹೇಗಾದರೂ ಮಾಡಿ ಬುದ್ಧಿ ಕಲಿಸಬೇಕೆಂದು ಎಲ್ಲರೂ ಕಾಯುತ್ತಿದ್ದರು. ಆ ಹಳ್ಳಿಯಲ್ಲಿ ಪ್ರತಿ ವರ್ಷದಂತೆ ಗ್ರಾಮ ದೇವತೆಯ ಹಬ್ಬ ಬಂತು.
ಸುತ್ತಮುತ್ತಲಿನ ಗ್ರಾಮದವರು ಸೇರಿದ್ದರು. ಗ್ರಾಮ ದೇವತೆಯ ಹಬ್ಬದ ವಿಶೇಷ ದೇವತೆಯ ಮೈ ಮೇಲೆ ಹಾಕಿರುವ ಸೀರೆಯನ್ನು ಹರಾಜು ಹಾಕುವುದಾಗಿತ್ತು . ಅದನ್ನು ತೆಗೆದುಕೊಂಡವರಿಗೆ ಪುಣ್ಯ ಲಭಿಸುವುದು ಎಂಬ ನಂಬಿಕೆಯಿತ್ತು . ಯಾವಾಗಲೂ ಸೀರೆ ಶ್ರೀಮಂತ ಕುಟುಂಬದ ಪಾಲಾಗುತ್ತಿತ್ತು .
ಈ ಸಾರಿ ಹಬ್ಬದಲ್ಲಿ ಹರಾಜು ಪ್ರಾರಂಭವಾಯಿತು, ಹರಾಜು ಕೂಗುವ ವ್ಯಕ್ತಿ ಸೀರೆ ತೋರಿಸುತ್ತಾ ಒಂದು ಸಾವಿರ ಎಂದನು. ಶ್ರೀಮಂತ ‘ ಎರಡು ಸಾವಿರ ‘ ಎಂದನು, ತಕ್ಷಣವೇ ಗುಂಪಿನಿಂದ ಐದು ಸಾವಿರ ‘ ಎಂಬ ಕೂಗು ಕೇಳಿಸಿತು. ಶ್ರೀಮಂತನಿಗೆ ಆಶ್ಚರ್ಯವಾಯಿತು. ನೋಡುತ್ತಾನೆ.
ತನ್ನ ಹಳ್ಳಿಯ ಬಡ ಕುಟುಂಬದ ವ್ಯಕ್ತಿಯೊಬ್ಬ ಕೂಗಿದ್ದು…! ಶ್ರೀಮಂತ ಏನನ್ನೂ ತೋರಿಸಿಕೊಳ್ಳದೆ ಮತ್ತೆ ಹತ್ತು ಸಾವಿರ ಎಂದನು. ಶ್ರೀಮಂತನ ಕೂಗಿಗೆ ಪ್ರತಿಯಾಗಿ “ ನನ್ನ ಇಡೀ ಆಸ್ತಿ ‘ ಎಂದು ಬಿಟ್ಟ ಬಡವ. ಇದನ್ನು ಕೇಳಿದ ಶ್ರೀಮಂತ ಆತನ ಸರಿಸಮಾನವಾಗಿ ಕೂಗಲು ಧೈರ್ಯ ಬರಲಿಲ್ಲ .
ಏನೂ ಮಾತು ಹೊರಡಲಿಲ್ಲ. ಮುಖಭಂಗವಾದಂತಾಗಿ ಮೆಲ್ಲನೆ ಕಾಲುಕಿತ್ತನು.
ಕೃಪೆ: kannadaDeevoge.in