ಬೆಂಗಳೂರು: ದ್ವೇಷ ರಾಜಕಾರಣ ಅನ್ನೋದು ಕುಮಾರಸ್ವಾಮಿ ಡಿಎನ್‌ಎ ನಲ್ಲಿದ್ದು, ಈ ಹಿಂದೆ ಅನೇಕ ಬಾರಿ ಅದು ಸಾಬೀತಾಗಿದೆ. ನಮ್ಮ ವಿಚಾರಕ್ಕೆ ಕುಮಾರಸ್ವಾಮಿ ಬರದಿದ್ದರೆ ಒಳ್ಳೇದು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ತಿರುಗೇಟು ನೀಡಿದರು.
ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಕೇತಗಾನಹಳ್ಳಿ ಜಮೀನು ಒತ್ತುವರಿ ತೆರವಿಗೂ ನಮಗೂ ಸಂಬಂಧ ಇಲ್ಲ. ಕೋರ್ಟ್ ಅಧಿಕಾರಿಗಳಿಗೆ ನೀಡಿರುವ ಆದೇಶದಂತೆ ಒತ್ತುವರಿ ತೆರವು ಮಾಡಲಾಗುತ್ತಿದ್ದು, ಸುಖಾಸುಮ್ಮನೆ ನಮ್ಮಮೇಲೆ ಆರೋಪ ಮಾಡೋದು ಸರಿಯಲ್ಲ.
ಸಾಮಾಜಿಕ ಹೋರಾಟಗಾರ ಹಿರೇಮಠ್ ಅವರು ನನ್ನ ಮೇಲೂ ಕೇಸ್ ಆಕಿದ್ದಾರೆ. ಅಂತೆಯೇ ಕುಮಾರಸ್ವಾಮಿ ಮೇಲೆ ಕೇಸ್ ಹಾಕಿದ್ದಾರೆ. ಆ ಕೇಸ್ ಆಧಾರಿತ ನ್ಯಾಯಾಲಯದ ಸೂಚನೆ ಮೇರೆಗೆ ಒತ್ತುವರಿ ತೆರವು ಮಾಡಲಾಗುತ್ತಿದೆ ಎಂದರು.
ಬಳ್ಳಾರಿ ಅದಿರಿಗೂ ನನಗೂ ಸಂಬಂಧವೇ ಇರಲಿಲ್ಲ ಆದರೂ ಕುಮಾರಸ್ವಾಮಿ ನನ್ನ ಹಾಗೂ ತಂಗಿ ತಮ್ಮನ ಮೇಲೆ ಪ್ರಕರಣ ದಾಖಲಿಸಿದ್ದರು. ಇದಕ್ಕಿಂತಲೂ ದ್ವೇಷದ ರಾಜಕಾರಣಕ್ಕೆ ಮತ್ತೊಂದು ಸಾಕ್ಷಿ ಬೇಕಾ ಎಂದು ಪ್ರಶ್ನಿಸಿದರು.
ರಾಮನಗರ ಜಿಲ್ಲೆಯ ಹೆಸರು ಬದಲಾಗದಂತೆ ಯಾರ ಬಳಿ ಏನು ಒತ್ತಡ ತರಲಾಯ್ತು ಎಂಬುದು ಗೊತ್ತಿದೆ. ಶತಾಯಗತಾಯ ಹೆಸರು ಬದಲಾವಣೆ ಮಾಡುತ್ತೆವೆ. ಕನಕಪುರ, ಚನ್ನ ಪಟ್ಟಣ, ಮಾಗಡಿ ಜನರು ಬದುಕಬೇಕು ಎಂದು ಆಸೆ ಪಡೋದ್ರಲ್ಲಿ ತಪ್ಪೇನಿದೆ..? ಎಂದು ಪ್ರಶ್ನಿಸಿದರು.
ಅಲ್ಲದೆ ಯೂತ್ ಕಾಂಗ್ರೆಸ್ ಪದಗ್ರಹಣ ಸಮಾರಂಭದಲ್ಲಿ ಮಂಡ್ಯದ ಕುರಿತು ಅವಹೇಳನ ಆರೋಪಕ್ಕೆ, ನಮ್ಮ ಹುಡುಗರು ಆತ್ಮೀಯವಾಗಿ ಮಾತಾಡ್ತೀವಿ, ಬೈಯ್ತಿವಿ ಅದುನ್ನೆಲ್ಲ ರಾಜಕೀಯ ಮಾಡೋದ್ ಎಷ್ಟು ಸರಿ ಎಂದು ಆರೋಪವನ್ನು ತಳ್ಳಿಹಾಕಿದರು.