ದೊಡ್ಡಬಳ್ಳಾಪುರ: ನಗರದ ಡಿಕ್ರಾಸ್ ಬಳಿಯ ಡಾ.ರಾಜ್‌ಕುಮಾರ್ ವೃತ್ತದ ಬಳಿಯ ಕಟ್ಟಡದ ಮೇಲೆ ಅಳವಡಿಸಲಾಗಿದ್ದ, ಅಸಭ್ಯ ಜಾಹೀರಾತನ್ನು (Advertisement) ಕರವೇ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ ನೇತೃತ್ವದ ತಂಡ ಕಿತ್ತೆಸೆದಿದೆ.
ಹಿಂದೂಪುರ- ಬೆಂಗಳೂರು ನಡುವಿನ ದೊಡ್ಡಬಳ್ಳಾಪುರದ ಡಿಕ್ರಾಸ್ ಬಳಿ ಖಾಸಗಿ ಕಂಪನಿಯೊಂದು ಮಹಿಳೆಯರ ಒಳ ಉಡುಪುಗಳ ಅಸಭ್ಯ ಜಾಹೀರಾತು ಅಳವಡಿಸಿತ್ತು.
ಇದರಿಂದಾಗಿ ಈ ವ್ಯಾಪ್ತಿಯಲ್ಲಿ ಸಂಚರಿಸುವ ಮಹಿಳೆಯರು, ಮಕ್ಕಳು ಮುಜುಗರ ಪಡುವಂತಾಗಿದೆ ಎಂಬ ಆರೋಪ ಸಾರ್ವಜನಿಕರದ್ದಾಗಿತ್ತು.
ಈ ವಿಷಯ ತಿಳಿದ ಕರವೇ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ ನೇತೃತ್ವದ ತಂಡ ಈ ಅಶ್ಲೀಲ ಜಾಹಿರಾತನ್ನು ಹರಿದು ಹಾಕಿದ್ದು, ಈ ರೀತಿ ಜಾಹಿರಾತು ಅಳವಡಿಸಿದವರ ವಿರುದ್ಧ ಕ್ರಮಕ್ಕೆ ನಗರಸಭೆಯ ಅಧಿಕಾರಿಗಳನ್ನು ಆಗ್ರಹಿಸಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಎಚ್ಚರಿಕೆ
ಇನ್ನೂ ಇದೇ ವ್ಯಾಪ್ತಿಯಲ್ಲಿ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಆಂಗ್ಲ ಭಾಷೆಯಲ್ಲಿ ಜಾಹೀರಾತು ಅಳವಡಿಸಿದ್ದು, ಈ ಕೂಡಲೇ ಸರ್ಕಾರದ ಆದೇಶದ ಅನ್ವಯ ಕನ್ನಡಕ್ಕೆ ಮೊದಲ ಪ್ರಾಶಸ್ತ್ಯವನ್ನು ನೀಡಿ ಜಾಹಿರಾತು ಪ್ರದರ್ಶಿಸುವಂತೆ ರಾಜಘಟ್ಟ ರವಿ ಆಗ್ರಹಿಸಿದ್ದಾರೆ.
ಈ ಕುರಿತು ಸೋಮವಾರದ ವರೆಗೆ ಗಡುವು ನೀಡಿದ್ದು, ಆಂಗ್ಲ ಭಾಷೆಯ ಜಾಹೀರಾತು ತೆರವುಗೊಳಿಸಿ ಕನ್ನಡದ ಜಾಹಿರಾತು ಅಳವಡಿಸದಿದ್ದರೆ ಯಾವುದೇ ಪ್ರಭಾವಕ್ಕೂ ಮಣಿಯದೆ ಕಾರ್ಯಾಚರಣೆ ನಡೆಸಿ ಜಾಹಿರಾತು ಕಿತ್ತೆಸೆಯಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಮುಖಂಡರಾದ ಕೋಡಿಹಳ್ಳಿ ಬಾಬು, ಮಂಜುನಾಥ್, ಡಿಕ್ರಾಸ್ ಬಾಲು, ಮೋಹನ್, ಮನೋಜ್, ರಮೇಶ್ ಮತ್ತಿತರರಿದ್ದರು.