ಬೆಂಗಳೂರು: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಬೆಂಗಳೂರು ಸಹಕಾರ ಹಾಲು ಒಕ್ಕೂಟದ (Bamul) ದೊಡ್ಡಬಳ್ಳಾಪುರ ನಿರ್ದೇಶಕ ಸ್ಥಾನದ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ.
ಬಿಜೆಪಿ ಮತ್ತು ಜೆಡಿಎಸ್ ಬೆಂಬಲಿತರ ನಡುವೆ ನಡೆದ ಜಿದ್ದಾಜಿದ್ದಿ ಹೋರಾಟದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ.ಸಿ.ಆನಂದಕುಮಾರ್ ಎರಡನೇ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರು ಡೇರಿ ವೃತ್ತ ಸಮೀಪ್ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ ಬೆಳಿಗ್ಗೆ 9-00 ಗಂಟೆಯಿಂದ ಸಂಜೆ 4-00 ಗಂಟೆಯವರೆಗೆ ಮತದಾನ ನಡೆದ ಬಳಿಕ, ಮತ ಎಣಿಕೆ ನಡೆಯಿತು.
ಈ ಹಿಂದೆ ಕಾಂಗ್ರೆಸ್‌ನಿಂದ ಬಮೂಲ್ ನಿರ್ದೇಶಕರಾಗಿ ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿಸಿ ಆನಂದ್ ಕುಮಾರ್ ಅವರು, ಪ್ರತಿಸ್ಪರ್ಧಿ ಜೆಡಿಎಸ್ ಬೆಂಬಲಿತರಾಗಿ ಸ್ಪರ್ಧೆ ಮಾಡಿದ್ದ ಹುಸ್ಕೂರು ಟಿ ಆನಂದ್ ಅವರು ವಿರುದ್ಧ 110 ಮತಗಳ ಅಂತರದಿಂದ ಜಯಶೀಲರಾಗಿದ್ದಾರೆ. (ಅಧಿಕೃತ ಮಾಹಿತಿ ತಿಳಿದು ಬರಬೇಕಿದೆ)
ಮಿತ್ರ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಡುವೆ ಹಣಾಹಣಿ ನಡೆದಿದ್ದು, ನಾಮಪತ್ರ ಹಿಂಪಡೆದ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಬೇಷರತ್ ನೀಡುವುದಾಗಿ ಘೋಷಿಸಿದ್ದರು, ಬಿಸಿ ಆನಂದ್ ಅವರ ಗೆಲುವಿನ ಓಟಕ್ಕೆ ತಡೆಯೊಡ್ಡಲು ಸಾಧ್ಯವಾಗಿಲ್ಲ.
ದೊಡ್ಡಬಳ್ಳಾಪುರ ತಾಲ್ಲೂಕಿನ ಐದು ಹೋಬಳಿಗಳ ಪೈಕಿ ಮಧುರೆ ಹೋಬಳಿ ಬೆಂಗಳೂರು ಉತ್ತರ ತಾಲ್ಲೂಕಿಗೆ ಸೇರಿದೆ. ಉಳಿದಂತೆ ತೂಬಗೆರೆ, ಕಸಬಾ, ದೊಡ್ಡಬೆಳವಂಗಲ ಹಾಗೂ ಸಾಸಲು ಹೋಬಳಿ ದೊಡ್ಡಬಳ್ಳಾಪುರ ಬಮೂಲ್ ನಿರ್ದೇಶಕ ಕ್ಷೇತ್ರಕ್ಕೆ ಸೇರಿದೆ.
ನಿರ್ದೇಶಕ ಸ್ಥಾನಕ್ಕೆ ಮತ ಚಲಾಯಿಸುವ ಹಕ್ಕನ್ನು 202 ಜನ ಹೊಂದಿದ್ದಾರೆ. ತಾಲ್ಲೂಕಿನಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಒಬ್ಬ ನಿರ್ದೇಶಕ ಅಥವಾ ಅಧ್ಯಕ್ಷರು ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದರು.
ಈ ಚುನಾವಣೆಯಲ್ಲಿ ಮತದಾನ ಮಾಡಿದ್ದು, ಬಿಸಿ ಆನಂದ್ ಅವರು 156 ಮತಗಳನ್ನು ಪಡೆದರೆ, ಹುಸ್ಕೂರು ಆನಂದವರು 41 ಮತಗಳನ್ನು ಪಡೆದಿದ್ದಾರೆ.
ಮತ ಎಣಿಕೆ ಕುರಿತು ಗೊಂದಲ ಸೃಷ್ಟಿಯಾಗಿತ್ತು. ಆರಂಭದಲ್ಲಿ ಮತ ಎಣಿಕೆ ಮುಂದೂಡಲಾಗುತ್ತಾದರೂ, ಬಳಿಕ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಮತ ಎಣಿಕೆ ಕಾರ್ಯ ಆರಂಭಿಸಿದರು.
ಬಿಸಿ ಆನಂದ್ ಕುಮಾರ್ ಅವರು ವಿಜೇತರೆಂದು ಘೋಷಿಸಿದ ಬೆನ್ನಲ್ಲೇ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ.