ಬೆಂಗಳೂರು: ಬಿಜೆಪಿಯಲ್ಲಿ ರೇಪ್ ಮಾಡಿದವರನ್ನು ಉಚ್ಚಾಟನೆ ಮಾಡುವುದಿಲ್ಲ. ನಮ್ಮಂತವರನ್ನು ಉಚ್ಚಾಟನೆ ಮಾಡ್ತಾರೆ ಎಂದು ಯಶವಂತಪುರದ ಬಿಜೆಪಿಯ ಉಚ್ಚಾಟಿತ ಶಾಸಕ ಎಸ್‌ಟಿ ಸೋಮಶೇಖರ್ (ST Somashekar) ಹೇಳಿದರು.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಎಸ್‌ಟಿ ಸೋಮಶೇಖರ್ ಅವರು,ಉಚ್ಚಾಟನೆಯನ್ನು ನಿರೀಕ್ಷಿಸಿದ್ದೆವು, ಒಳ್ಳೆಯದಾಯ್ತು ಎಂದರು.
ನನಗೆ 1% ಸಹ ಬೇಸರ, ಅಸಮಾಧಾನ ಇಲ್ಲ. ಉಚ್ಚಾಟನೆ ಮಾಡಿದ್ದು ಖುಷಿ ಇದೆ. ಬಿಜೆಪಿಯಲ್ಲಿ ನನ್ನ ಪರವಾಗಿ ಮಾತನಾಡಲು ಯಾರಿಗೂ ಧೈರ್ಯ ಇಲ್ಲ.
ಬಿಜೆಪಿಯಲ್ಲಿ ಮಾಡಬಾರದ್ದನ್ನ ಮಾಡಿರೋರು ಯರ‍್ಯಾರೋ ಇದ್ದಾರೆ. ಅತ್ಯಾಚಾರದ ಆರೋಪ ಹೊತ್ತಿರೋರು ಇದ್ದಾರೆ. ಅವರೆಲ್ಲರನ್ನೂ ಬಿಟ್ಟು ನನ್ನ ಉಚ್ಛಾಟನೆ ಮಾಡಿದ್ದಾರೆ.
ಉಚ್ಚಾಟನೆ ಯಾಕೆ ಮಾಡಿದ್ದೀರಿ ಅಂತಾನೂ ಕೇಳೋದಿಲ್ಲ. ನಾನು ಈಗ ಫ್ರೀ ಬರ್ಡ್ ಆಗಿದ್ದೀನಿ. ಇನ್ನು ಫ್ರೀ ಬರ್ಡ್ ಆಗಿ ಓಡಾಡುತ್ತೇನೆ. ಕಾಂಗ್ರೆಸ್ ಇಲ್ಲ, ಬಿಜೆಪಿ ಇಲ್ಲ ಆರಾಮಾಗಿ ಇದ್ದೇವೆ. ಮುಂದಿನ ನಡೆ ಬಗ್ಗೆ ಈಗ ಯೋಚನೆ ಮಾಡಿಲ್ಲ ಎಂದರು.
ಶೀಘ್ರದಲ್ಲೇ ಸುದ್ದಿಗೋಷ್ಠಿ
ಇನ್ನು ಶಾಸಕ ಶಿವರಾಮ್ ಹೆಬ್ಬಾರ್ ಮಾತನಾಡಿ, ಪಕ್ಷದ ನಿರ್ಧಾರವನ್ನು ಸ್ವಾಗತ ಮಾಡುತ್ತೇನೆ. ಶೀಘ್ರದಲ್ಲಿಯೇ ಸುದ್ದಿಗೋಷ್ಠಿ ನಡೆಸಿ ಎಲ್ಲವನ್ನೂ ಹೇಳುತ್ತೇನೆ ಎಂದಿದ್ದಾರೆ.
ಪಕ್ಷದ ವಿರುದ್ಧ ನಾನು ಮಾತನಾಡಲು ಕಾರಣವೇನೆಂದು ಹೇಳುತ್ತೇನೆ. ಯಾವುದೇ ಸಭೆ, ಸಮಾರಂಭಗಳಿಗೆ ನನ್ನನ್ನು ಕರೆಯುತ್ತಿರಲಿಲ್ಲ. ಹೀಗಿರುವಾಗ ನಾನಾಗಿಯೇ ಹೋಗುವ ಜಾಯಮಾನ ನನ್ನದಲ್ಲ. ಪಕ್ಷದಿಂದ ಉಚ್ಚಾಟನೆ ಮಾಡಿದ್ದಕ್ಕೆ ಬಿಜೆಪಿಗೆ ಆಗುವ ನಷ್ಟದ ಬಗ್ಗೆ ಅವರು ಯೋಚಿಸಲಿ. ನಮಗೆ ಆಗುವ ಲಾಭ-ನಷ್ಟದ ಬಗ್ಗೆ ನಾವು ಯೋಚಿಸುತ್ತೇವೆ ಎಂದು ಹೇಳಿದರು.
ಮುಂದಿನ ವಾರ ಬೆಂಗಳೂರಿಗೆ ಬಂದು ಎಲ್ಲವನ್ನೂ ಮಾತನಾಡುತ್ತೇನೆ. ನನ್ನ ಮುಂದಿನ ನಡೆ ಬಗ್ಗೆ ಕಾದು ನೋಡಿ ಎಂದು ಹೇಳಿದ್ದಾರೆ.