ಮುಂಬೈ: ಹಿಂದು, ಬೌದ್ಧ ಅಥವಾ ಸಿಖ್ ಹೊರತುಪಡಿಸಿ, ಬೇರೆ ಯಾವುದೇ ಮತಕ್ಕೆ ಸೇರಿದ ವ್ಯಕ್ತಿ ಪರಿಶಿಷ್ಟ ಜಾತಿ (SC) ಪ್ರಮಾಣಪತ್ರ ಪಡೆದಿದ್ದರೆ ಅದನ್ನು ರದ್ದು ಗೊಳಿಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಬೇರೆ ಮತಕ್ಕೆ ಸೇರಿ ಪರಿಶಿಷ್ಟ ಜಾತಿ ಪ್ರಮಾಣಪತ್ರದ ಮೂಲಕ ಸರ್ಕಾರಿ ಉದ್ಯೋಗಗಳಂತಹ ಮೀಸಲಾತಿಯ ಪ್ರಯೋಜನಗಳನ್ನು ಪಡೆದಿರುವಂತಹ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.
ಅಂತಹ ವ್ಯಕ್ತಿಯು ಮೋಸದಿಂದ ಪಡೆದ ಎಸ್ಸಿ ಪ್ರಮಾಣಪತ್ರವನ್ನು ಬಳಸಿಕೊಂಡು ಚುನಾವಣೆಯಲ್ಲಿ ಗೆದ್ದರೆ, ಅವರ ಚುನಾವಣೆಯನ್ನು ಅನೂರ್ಜಿತವೆಂದು ಘೋಷಿಸಲಾಗುತ್ತದೆ ಎಂದು ಫಡ್ನವೀಸ್ ವಿಧಾನ ಪರಿಷತ್ತಿನಲ್ಲಿ ಹೇಳಿದರು.
ಒಬ್ಬ ವ್ಯಕ್ತಿ ಯಾವುದೇ ಧರ್ಮವನ್ನು ಅನುಸರಿಸುವುದು ಅವನ ಆಯ್ಕೆಗೆ ಬಿಟ್ಟಿರುವುದು. ಅಂತೆಯೇ ಆತನ ಒಪ್ಪಿಗೆ ಮೇರೆ ಇನ್ನೊಬ್ಬ ವ್ಯಕ್ತಿ ಆತನನ್ನು ಮತಾಂತರಿಸಬಹುದು, ಆದರೆ ಮತಾಂತರಕ್ಕಾಗಿ ಬಲಪ್ರಯೋಗ, ವಂಚನೆ ಅಥವಾ ಪ್ರಲೋಭನೆ ಬಳಸಲು ಕಾನೂನು ಅನುಮತಿಸುವುದಿಲ್ಲ ಎಂದು ಫಡ್ನವೀಸ್ ಹೇಳಿದರು.
ರಾಜ್ಯ ಸರ್ಕಾರ ದಬ್ಬಾಳಿಕೆ ಮತ್ತು ವಂಚನೆಯ ಮೂಲಕ ಮತಾಂತರದ ಪ್ರಕರಣಗಳನ್ನು ಎದುರಿಸಲು ಕಠಿಣ ನಿಬಂಧನೆಗಳನ್ನು ತರಲು ಉದ್ದೇಶಿಸಿದೆ ಎಂದು ಹೇಳಿದರು.