ಮೋತಿಹಾರಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸಲಹೆಯಂತೆ ರಾಜ್ಯದಲ್ಲಿ 125 ಯೂನಿಟ್ ಉಚಿತ ವಿದ್ಯುತ್ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ತಿಳಿಸಿದ್ದಾರೆ.
ಬಿಹಾರದ ಮೋತಿಹಾರದಲ್ಲಿ ನಡೆದ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯೊಂದಿಗೆ ವೇದಿಕೆ ಹಂಚಿಕೊಂಡಿದ್ದ ಸಂದರ್ಭದಲ್ಲೇ ತಮ್ಮ ಭಾಷಣದಲ್ಲಿ ಅವರು ಈ ವಿಚಾರವನ್ನು ತಿಳಿಸಿದರು.
ರಾಜ್ಯದ ಜನರು ವಿದ್ಯುತ್‌ಗೆ ಹಣ ನೀಡುವ ಅಗತ್ಯವಿಲ್ಲ. ಈ ಯೋಜನೆ ಜಾರಿಗೆ ಮೋದಿ ಅವರೇ ನೆರವು ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಸಂಪುಟದಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಿಲ್ಲ. ಪ್ರಧಾನಿ ಹೊರಡುತ್ತಿದ್ದಂತೆ, ಪಾಟ್ನಾಗೆ ಮರಳಿ ಅಗತ್ಯ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಮೋದಿ ಅವರ ವರ್ಚಸ್ಸಿನಿಂದಾಗಿ ಮುಂದಿನ ಬಿಹಾರ ಚುನಾವಣೆಯಲ್ಲಿ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿ ಮಾತನಾಡಿದ ಅವರು, ನಾವು ಮೋದಿಯನ್ನು ತುಂಬಾ ಗೌರವಿಸುವ ಜೊತೆಗೆ ಅವರ ಸಲಹೆಯನ್ನು ಗಮನದಲ್ಲಿರಿಸಿಕೊಂಡು ಕೆಲಸ ಮಾಡುತ್ತಿದ್ದೇವೆ ಎಂದರು.
ತುಷ್ಠಿಕರಣದ ರಾಜಕಾರಣ ಮಿತಿಮೀರಿದೆ; ಇನ್ನೂ ಇದೇ ವೇದಿಕೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರ ಒಳನುಸುಳುಕೋರರನ್ನು ಪ್ರೋತ್ಸಾಹಿಸುತ್ತಿದೆ ಎಂದು ನೇರವಾಗಿ ಆರೋಪಿಸಿದರು.
ತುಷ್ಠಿಕರಣ ರಾಜಕಾರಣದಲ್ಲಿ ಎಲ್ಲೆ ಮಿತಿ ಮೀರುತ್ತಿದೆ ಎಂದಿದ್ದಾರೆ, ಒಳ ನುಸುಳು ಕೋರರಿಗೆ ನಕಲಿ ದಾಖಲೆಗಳನ್ನು ತಯಾರಿಸಲಾಗುತ್ತಿದೆ. ಇದು ದೇಶಕ್ಕೆ ಬೆದರಿಕೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.