ದೊಡ್ಡಬಳ್ಳಾಪುರ: ತಾಲೂಕಿನ ವಿವಿದೆಡೆಗಳಲ್ಲಿನ ಶ್ರೀ ರಾಘವೇಂದ್ರ ಸ್ವಾಮಿ (Sri Raghavendra Swamy) ಮಠಗಳಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ 354ನೇ ಆರಾಧನಾ ಮಹೋತ್ಸವವು ಶ್ರದ್ಧಾ ಭಕ್ತಿಗಳಿಂದ ನೆರವೇರಿತು.
ತಾಲೂಕಿನ ತೂಬಗೆರೆ ಹೋಬಳಿ ಲಕ್ಕಸಂದ್ರದಲ್ಲಿರುವ ಶ್ರೀ ಗುರು ರಾಘವೇಂದ್ರಸ್ವಾಮಿ ಮಠದಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನಾ ಸಂಭ್ರಮದಿಂದ ಮಹೋತ್ಸವ ನೆರವೇರಿತು.
ಆರಾಧನಾ ಮಹೋತ್ಸವದ ಅಂಗವಾಗಿ, ರಾಘವೇಂದ್ರಸ್ವಾಮಿ ಬೃಂದಾವನಕ್ಕೆ ಹಾಗೂ ಇಲ್ಲಿನ ಪಂಚಮುಖಿ ಆಂಜನೇಯಸ್ವಾಮಿಗೆ ವಿಶೇಷ ಅಲಂಕಾರ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಗಿಯಿಂದಲೇ ಬೃಂದಾವನಕ್ಕೆ ಮಹಾ ಪಂಚಾಮೃತ ಅಭಿಷೇಕ, ಹೋಮಗಳು, ಹವನ, ಗುರುಸ್ತೋತ್ರ ಪಾರಾಯಣ ನೆರವೇರಿಸಲಾಯಿತು. ಮಠದ ಆವರಣಕ್ಕೆ ತಳಿರು ತೋರಣದ ವಿಶೇಷವಾಗಿ ಆಲಂಕರಿಸಿ ಪೂಜೆ ಸಲ್ಲಿಸಲಾಯಿತು.
ಮಧ್ಯಾಹ್ನ ಶ್ರೀ ಸೀತಾರಾಮ ಲಕ್ಷ್ಮಣ ಹನುಮತ್ ಸಮೇತ ಶ್ರೀ ಪ್ರಹ್ಲಾದ ರಾಯರ ಮಹಾರಥೋತ್ಸವ ನಡೆಯಿತು. ಶ್ರೀ ಗುರು ರಾಯರ ದರ್ಶನ ಪಡೆದು ಭಕ್ತರು ಮಹಾ ಪ್ರಸಾದವನ್ನು ಸ್ವೀಕರಿಸಿದರು.
ನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಪೂರ್ವಾರಾಧನೆ ಅಂಗವಾಗಿ ಮಧು ಅಭಿಷೇಕ,ವಿಷ್ಣು ಸಹಸ್ರನಾಮ ಹೋಮ, ಸೋಮವಾರ ಸಹಸ್ರ ಶಂಖ ಕ್ಷೀರಾಭಿಷೇಕ, ರಾಘವೇಂದ್ರ ಸ್ತೋತ್ರ ಹೋಮ, ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳು ನಡೆದವು.
ಆ.12 ರಂದು ಶ್ರೀ ರಾಘವೇಂದ್ರ ಸ್ವಾಮಿಗಳ ರಥೋತ್ಸವ ಊರಿನ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ.
ಬಾಶೆಟ್ಟಿಹಳ್ಳಿಯಲ್ಲಿ ಆರಾಧನೆ: ತಾಲೂಕಿನ ಬಾಶೆಟ್ಟಿಹಳ್ಳಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆದ ಮಧ್ಯಾರಾಧನೆ ಅಂಗವಾಗಿ ರಥೋತ್ಸವ ನಡೆಯಿತು.
ಕಳೆದ 16ವರ್ಷಗಳ ಹಿಂದೆಯಷ್ಟೇ ಸತ್ಯಾತ್ಮ ತೀರ್ಥರಿಂದ ಸ್ಥಾಪಿತವಾಗಿರುವ ರಾಯರ ಬೃಂದಾವನ, ಸೀತಾರಾಮಾಂಜನೇಯ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸಹಸ್ರಾರು ಭಕ್ತಾದಿಗಳು ಪ್ರಸಾದ ಸ್ವೀಕರಿಸಿದರು.