ದೊಡ್ಡಬಳ್ಳಾಪುರ: ನಗರದ 21ನೇ ವಾರ್ಡ್ ಹೇಮಾವತಿ ಪೇಟೆಯ ನಗರಸಭಾ ಸದಸ್ಯ ಎಸ್.ಎ.ಭಾಸ್ಕರ್ (S.A. Bhaskar) ಅನಾರೋಗ್ಯದಿಂದ ಸೋಮವಾರ ಬೆಳಗಿನ ಜಾವ ನಿಧನರಾಗಿದ್ದಾರೆ. ಅವರಿಗೆ 55 ವರ್ಷ ವಯಸ್ಸಾಗಿತ್ತು.
ಎಸ್.ಎ.ಭಾಸ್ಕರ್ ಅವರು ಕರ್ನಾಟಕ ಛಾಯಾಗ್ರಾಹಕರ ಸಂಘದ ನಿರ್ದೇಶಕರಾಗಿ, ದೊಡ್ಡಬಳ್ಳಾಪುರ ಫೋಟೋ ಮತ್ತು ವಿಡಿಯೋ ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ನಗರಸಭೆಗೆ 2ನೇ ಬಾರಿಗೆ ಸದಸ್ಯರಾಗಿ ಆಯ್ಕೆಯಾಗಿದ್ದರು.
ಹೇಮಾವತಿ ಪೇಟೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಮೃತರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ಮೃತರ ಅಂತ್ಯಕ್ರಿಯೆ ನಗರದ ಹೊರವಲಯದ ಮುಕ್ತಿಧಾಮದಲ್ಲಿ ಸೋಮವಾರ ಸಂಜೆ ನೆರವೇರಿತು.
ಮೃತರ ಕಣ್ಣುಗಳನ್ನು ಕುಟುಂಬದವರು ಅಭಿಷೇಕ್ ನೇತ್ರಧಾಮದ ಡಾ.ರಾಜ್ ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರಕ್ಕೆ ನೀಡುವ ಮೂಲಕ ಭಾಸ್ಕರ್ ಅವರ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ.
ಎಸ್.ಎ.ಭಾಸ್ಕರ್ ನಿಧನಕ್ಕೆ ಕರ್ನಾಟಕ ಛಾಯಾಗ್ರಾಹಕರ ಸಂಘ, ದೊಡ್ಡಬಳ್ಳಾಪುರ ಫೋಟೋ ಮತ್ತು ವಿಡಿಯೋ ಛಾಯಾಗ್ರಾಹಕರ ಸಂಘದ ಅಧಕ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.