Harithalekhani: ಒಂದೂರಿನಲ್ಲಿ ಒಂದು ವಯಸ್ಸಾದ ಗಿಳಿ ಇತ್ತು, ಅದಕ್ಕೆ ಎರಡು ಮರಿಗಳಿದ್ದವು (Parrots). ಬರಬರುತ್ತ ವಯಸ್ಸಾದ ಗಿಳಿಯ ಆರೋಗ್ಯ ಕೆಟ್ಟಿತು. ಒಂದು ದಿನ ವಯಸ್ಸಾದ ಗಿಳಿಯು ಮರಣ ಹೊಂದಿತು.
ಉಳಿದ ಎರಡು ಗಿಳಿಮರಿಗಳನ್ನು ಒಬ್ಬೊಬ್ಬರು ಸಾಕಿದರು. ಒಂದನೆಯ ಗಿಳಿಮರಿಯನ್ನು ಒಬ್ಬ ಕುಟುಕ ತೆಗೆದುಕೊಂಡು ಹೋದ, ಇನ್ನೊಂದು ಗಿಳಿಮರಿಯನ್ನು ಒಬ್ಬ ಸಾಧು ತೆಗೆದುಕೊಂಡು ಹೋದ. ಹೀಗೆ ಅವು ಇಬ್ಬರ ಪಾಲಾದವು.
ಒಂದು ದಿನ ಒಬ್ಬ ಮನುಷ್ಯ ಯಾತ್ರೆಗೆ ಹೋಗುತ್ತಿದ್ದಾಗ ನಡುವೆ ಒಂದು ಕಾಡು ಇತ್ತು. ಅವನಿಗೆ ಸ್ವಲ್ಪ ಆಯಾಸವಾಯಿತು. ಅವನು ಅಲ್ಲೇ ಹತ್ತಿರದಲ್ಲಿದ್ದ ಕಟುಕನ ಮನೆಗೆ ಬಂದ. ಅಲ್ಲಿದ್ದ ಗಿಳಿಮರಿಯು ಕ್ರೂರತನದಿಂದ, ‘ಇವನ ಕಣ್ಣು ಕೀಳು, ಕಾಲನ್ನು ಮುರಿ, ಇವನಿಗೆ ಒಂದು ತೊಟ್ಟು ನೀರನ್ನೂ ಕೊಡಬೇಕು, ಸಾಯಿಸು’ ಎಂದು ಹೇಳಿತು. ಆ ಮನುಷ್ಯ ಅದರ ಮಾತನ್ನು ಕೇಳಿದವನೇ ಹೊರಗೆ ಓಡಿದ.
ಸ್ವಲ್ಪ ದೂರ ಹೋದ ನಂತರ ಅವನಿಗೆ ಮತ್ತಷ್ಟು ಆಯಾಸವಾಯಿತು. ಅಲ್ಲೇ ಸನಿಹದಲ್ಲಿ ಒಂದು ಆಶ್ರಮ ಕಾಣಿಸಿತು. ಆ ಮನುಷ್ಯ ಅಲ್ಲಿಗೆ ಹೋದ, ಅಲ್ಲಿದ್ದ ಗಿಳಿಮರಿಯು ‘ಒಳಗೆ ಬನ್ನಿ. ಸ್ವಾಗತ, ಸುಸ್ವಾಗತ. ನೀವು ದಣಿದು ಬಂದಿದ್ದೀರಿ ಇಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿರಿ. ಆಶ್ರಮದಲ್ಲಿ ಹಣ್ಣು-ಹಂಪಲು ಹಾಗೂ ಕುಡಿಯಲು ನೀರೂ ಸಹ ಇದೆ. ಅದನ್ನು ಸೇವಿಸಿ ವಿಶ್ರಾಂತಿ ಪಡೆಯಿರಿ’ ಎಂದಿತು.
ಆ ಮನುಷ್ಯನಿಗೆ ಆಶ್ಚರ್ಯವಾಯಿತು. ಈ ಎರಡೂ ಗಿಳಿಮರಿಗಳಿಗೆ ಒಂದೇ ತಾಯಿಯೇ ಆದರೂ ಕಟುಕನ ಹತ್ತಿರ ಬೆಳೆದ ಗಿಳಿ ಕ್ರೂರತನ ಕಲಿಯಿತು. ಸಂತನ ಹತ್ತಿರ ಬೆಳೆದ ಗಿಳಿ ಒಳ್ಳೆಯತನ ಕಲಿಯಿತು. ಅವು ಬೆಳೆದ ವಾತಾವರಣದ ಪ್ರಭಾವಕ್ಕೆ ಒಳಗಾದವು. ನಾವು ಬೆಳೆಯುವ ವಾತಾವರಣ ಸರಿಯಿದ್ದರೆ ನಾವು ಕಲಿಯುವ ರೀತಿಯೂ ಚೆನ್ನಾಗಿರುತ್ತದೆ.
ಕೃಪೆ: ಕೆ.ಮುರಳಿ, ಮಕ್ಕಳಿಗಾಗಿ ನೂರಾರು ಕಥೆಗಳು, ಕೃಷಿವಿಕಾಸ್ ಪಬ್ಲಿಕೇಷನ್ಸ್, ಬೆಂಗಳೂರು.