ಬೆಂಗಳೂರು: ಗೃಹಸಚಿವ ಡಾ.ಜಿ.ಪರಮೇಶ್ವರ ಅವರು ಯೂಟ್ಯೂಬರ್‌ಗಳಿಗೆ (YouTubers) ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅವಹೇಳನ ನಿಲ್ಲಿಸುವಂತೆ ಸೂಚನೆ ನೀಡಿದ್ದು, ಮತ್ತೆ ಮುಂದವರಿಸಿದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಧರ್ಮಸ್ಥಳ ಕ್ಷೇತ್ರದ ಕುರಿತು ಯೂಟ್ಯೂಬರ‌್‌ಗಳು ಅವಹೇಳನ ಮಾಡಿದ್ದಾರೆ, ಅವರ ವಿರುದ್ಧ ಕ್ರಮ ಏಕಿಲ್ಲವೆಂದು ಬಿಜೆಪಿಯ ಶಾಸಕರು ಸದನದಲ್ಲಿ ನಿನ್ನೆ ಆಕ್ರೋಶ ವ್ಯಕ್ತಪಡಿಸಿದರು.
ಈ ಬೆನ್ನಲ್ಲೇ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ಯೂಟ್ಯೂಬರ್‌ಗಳಿಗೆ ಕ್ಷೇತ್ರದ ಬಗ್ಗೆ ಅವಹೇಳನ ನಿಲ್ಲಿಸುವಂತೆ ಸೂಚನೆ ನೀಡಿದ್ದು, ಮತ್ತೆ ಮಾಡಿದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಚರ್ಚೆ
ಗೃಹಸಚಿವರ ಎಚ್ಚರಿಕೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ. ಅದರಲ್ಲಿ ಪ್ರಮುಖವಾಗಿ ಚರ್ಚಿತ ವಿಚಾರ ಈ ರೀತಿಯಾಗಿದೆ.
ಸಾಮಾಜಿಕ ಜಾಲತಾಣ ಸಕ್ರಿಯವಾದಂತೆ ಪತ್ರಿಕೋದ್ಯಮವನ್ನು ಮಾರಾಟಕ್ಕಿಟ್ಟವರಿಗೆ ಸಿಕ್ಕಾಪಟ್ಟೆ ಆತಂಕ ಎದುರಾಗಿದೆ. ಏಕೆಂದರೆ ಯಾರದೋ ಹಂಗು, ಯಾರದೋ ಸ್ಪಾನ್ಸರ್, ಜಾಹೀರಾತು ಪಡೆದು ಅವರಿಗೆ ಪೂರಕವಾಗಿ ವರದಿ ಮಾಡಬೇಕಾದ ಅನಿರ್ವಾರ್ಯತೆಯಿಂದ ಸಾಮಾಜಿಕ ಜಾಲತಾಣ ಮುಕ್ತವಾಗಿದೆ.
ಆದರೆ ಇದು ಮಾಧ್ಯಮ ಎಂದರೆ ನಾವು ಮಾತ್ರ ಎಂದು 1970 ರ ನಿಯಮಕ್ಕೆ ಅಂಟಿಕೊಂಡಿರುವ, ಅದೇ ಕಾನೂನು ಎಂಬಂತೆ (ತಿದ್ದುಪಡಿ ಮಾಡಲು ಅವಕಾಶ ನೀಡದೆ ಷಡ್ಯಂತ್ರ ಎಂಬ ಆರೋಪ ಇದೆ) ವರ್ತಿಸುವವರಿಗೆ ಅಸಹಿನೀಯವಾಗಿದೆ.
ಏಕೆಂದರೆ ಡಿಜಿಟಲ್ ಯುಗದಲ್ಲಿ ದಿನ ಪತ್ರಿಕೆಗಳಿಗೆ ಪ್ರತಿಸ್ಪರ್ಧಿಯಾಗಿ ನ್ಯೂಸ್ ವೆಬ್ಸೈಟ್‌ಗಳು, ಖಾಸಗಿ ಚಾನಲ್ ಗಳಿಗೆ ಸ್ಪರ್ಧಿಯಾಗಿ ಯೂಟ್ಯೂಬ್ ಚಾನಲ್ಗಳು ಎದ್ದು ನಿಂತಿವೆ. ಇದು ನಮ್ಮದೇ ಸಾಮ್ರಾಜ್ಯ, ನಾವೇಳಿದ್ದೇ ಸುದ್ದಿ ಎಂಬಂತೆ ವರ್ತಿಸುತ್ತಿದ್ದವರಿಗೆ ತೀವ್ರ ಹಿನ್ನಡೆಗೂ ಕಾರಣವಾಗಿದೆ.
ಧರ್ಮಸ್ಥಳ ಪ್ರಕರಣದ ಕುರಿತು ಖಾಸಗಿ ನ್ಯೂಸ್ ಚಾನಲ್ ಗಳು ವರದಿ ಪ್ರಕಟಿಸದೆ ಇದ್ದಾಗ ಕೆಲ ಯೂಟ್ಯೂಬ್ ಚಾನಲ್‌ಗಳು ವರದಿ ಪ್ರಸಾರ ಮಾಡಿ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದೆ.
ಇದರ ನಡುವೆ ಕೆಲ ಕಾನೂನು ಪ್ರಕ್ರಿಯೆಯ ಅನಿರ್ವಾರ್ಯತೆಯಿಂದ ಖಾಸಗಿ ಚಾನಲ್‌ಗಳು ಕೂಡ ವರದಿ ಮಾಡಬೇಕಾದ ಅನಿವಾರ್ಯತೆ ಎದುರಾಯಿತು. ಆದರೆ ಧರ್ಮಸ್ಥಳ ಪ್ರಕರಣದ ಕುರಿತು ಪರ ಹಾಗೂ ವಿರುದ್ಧ ಯೂಟ್ಯೂಬರ್‌ಗಳು ಚರ್ಚೆ, ವರದಿ ಮಾಡುತ್ತಿದ್ದಾರೆ.
ಇತ್ತೀಚೆಗಷ್ಟೇ ಕೆಲ ಯೂಟ್ಯೂಬರ್ಗಳು ಧರ್ಮಸ್ಥಳ ಕ್ಷೇತ್ರದ ಕುರಿತು ಅವಹೇಳನ ಮಾಡುತ್ತಿದ್ದಾರೆ ಎಂಬ ಆಕ್ರೋಶ ಕೂಡ ವ್ಯಾಪಕವಾಗಿದೆ. ಇದು ಗಲಾಟೆಗೂ ಕಾರಣವಾಗಿ, ಕೆಲವರು ಆಸ್ಪತ್ರೆಗೆ ಸೇರಿದ್ದರೆ ಮತ್ತೆ ಕೆಲವರ ವಿರುದ್ಧ ದೂರು ದಾಖಲಾಗಿದೆ.
ಇದರ ಬೆನ್ನಲ್ಲೇ ನಿನ್ನೆ ಸದನದಲ್ಲಿ ಗೃಹಸಚಿವರ ನಿಲುವು ಒಪ್ಪಲೇ ಬೇಕಾದ ವಿಷಯ. ಏಕೆಂದರೆ ಅಸಹನೀಯ, ಅಗೌರವ, ಅವಹೇಳನ ಮಾಡಿದ ಯಾವುದೇ ಮಾಧ್ಯಮಗಳ ವಿರುದ್ಧ ಕ್ರಮವಾಗಬೇಕು. ಅದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಆದರೆ ಖಾಸಗಿ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗುವ ಇದೇ ರೀತಿಯ ವರದಿಗಳ ಬಗ್ಗೆ ಕೂಡ ಇದೇ ನಿಯಮ ಪಾಲನೆ ಆಗಬೇಕೆಂಬ ಮಾತು ವ್ಯಾಪಕವಾಗಿದೆ.
ಖಾಸಗಿ ಚಾನಲ್‌ಗಳ ವಿರುದ್ಧ ಕ್ರಮಕ್ಕೆ ಮುಂದಾದರೆ ಪತ್ರಿಕಾ ಸ್ವಾತಂತ್ರ್ಯ ಹರಣ ಎಂದು ಕಿರುಚುವವರು, ಯೂಟ್ಯೂಬರ್‌ಗಳಿಗೆ ಎಚ್ಚರಿಕೆ ನೀಡಿದರೆ ಸಂಭ್ರಮಿಸುತ್ತಿದ್ದಾರೆ. ಈಗ ಅವರಿಗೆ ಪತ್ರಿಕಾ ಸ್ವಾತಂತ್ರ್ಯ ಕಾಣೆಯಾಗಿದೆಯೇ ಎಂಬ ಪ್ರಶ್ನೆ ಕೇಳಿಬರುತ್ತಿದೆ.
ಇದಕ್ಕೆ ಉದಾಹರಣೆಯಾಗಿ ಒಂದು ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪು ನೀಡುವುದಕ್ಕೂ ಮುನ್ನವೇ ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ವಿರುದ್ಧ ಕಿಲ್ಲಿಂಗ್ ಸ್ಟಾರ್ ಎಂದು ವರದಿ ಪ್ರಸಾರ, ಪತ್ರಿಕೆಗಳ ವರದಿ ಕುರಿತು ಇದೇ ರೀತಿಯ ಕ್ರಮ ಆಗಲೇ ಬೇಕು ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ.
ಅಳಿದುಳಿದವರಲ್ಲಿ ನಾವೇ ನಂಬರ್ 1 ಎಂದು ಮುದ್ರಣ ಕುಸಿದಿರುವ ಪತ್ರಿಕೆಗಳು, ವೀಕ್ಷಕರಿಂದ ತಿರಸ್ಕಾರಕ್ಕೆ ಒಳಗಾಗಿರುವ ಕೆಲ ಖಾಸಗಿ ಚಾನಲ್ಗಳು ಮಾತ್ರ ಮಾಧ್ಯಮ ಎಂಬ ನಿಲುವಿನಿಂದ ಸರ್ಕಾರಗಳು ಹೊರಬರಬೇಕಿದೆ.
ಸುಳ್ಳು, ಊಹಾಪೋಹ ವರದಿ ಪ್ರಸಾರ ಮಾಡುವ ಯಾವುದೇ ಮಾಧ್ಯಮವಾಗಲಿ ಅವರ ವಿರುದ್ಧ ಒಂದೇ ರೀತಿಯ ಕ್ರಮಕೈಗೊಳ್ಳುವಂತೆ ಆಗ್ರಹ ಕೇಳಿಬರುತ್ತಿದೆ. ಅಲ್ಲದೆ ಎಲ್ಲರಿಗೂ ಒಂದೇ ಮಾದರಿಯಾದ ಸುಳ್ಳು ಸುದ್ದಿಗೆ ಕಡಿವಾಣ ಕುರಿತಾದ ಕಾನೂನು ಶೀಘ್ರವೇ ಜಾರಿಗೊಳಿಸುವಂತೆ ಒತ್ತಾಯದ ಕೂಗು ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ.