ಕೆ.ಎಂ.ಸಂತೋಷ್, ಆರೂಢಿ, (ದೊಡ್ಡಬಳ್ಳಾಪುರ): ಕಾರ್ಮಿಕರ ಹಕ್ಕು, ಕಲ್ಯಾಣಕ್ಕಾಗಿ ಸರ್ಕಾರ ಉಚಿತವಾಗಿ ನೀಡುತ್ತಿರುವ ಕಾರ್ಮಿಕರ ಕಾರ್ಡ್ (Labor card)ಗಳನ್ನ ವ್ಯಾಪಾರದ ಸರಕಾಗಿಸಿಕೊಂಡು ಖಾಸಗಿ ವ್ಯಕ್ತಿಗಳು ದುರುಪಯೋಗಪಡಿಸಿಕೊಳ್ಳುವ ಮೂಲಕ ಕಾರ್ಮಿಕರಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ.
ದೊಡ್ಡಬಳ್ಳಾಪುರ ನಗರದ ವಿವೇಕಾನಂದ ಪ್ರತಿಮೆ ಬಳಿ ಕೇಂದ್ರ ಒಂದರಲ್ಲಿ ಕಾರ್ಮಿಕರ ಕಾರ್ಡ್ ವಿತರಣೆ ಮಾಡುತ್ತಿದ್ದು, 100 ರೂ ವಸೂಲಿ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ರಾಜ್ಯ ಸರ್ಕಾರ ಕಾರ್ಮಿಕ ಕಾರ್ಡ್ ಪಡೆದವರಿಗೆ ಮತ್ತು ಅವರ ಕುಟುಂಬದವರಿಗೆ ಆರೋಗ್ಯ ಸೌಲಭ್ಯ, ವೈದ್ಯಕೀಯ ಖರ್ಚು ವೆಚ್ಚದ ಸಹಾಯಧನ, ಕಾಲಕಾಲಕ್ಕೆ ಅಗತ್ಯ ಇರುವ ಕಿಟ್ಗಳ ವಿತರಣೆ, ಕಾರ್ಮಿಕರ ಮಕ್ಕಳಿಗೆ ಲ್ಯಾಪ್ಟಾಪ್, ಸ್ಕೂಲ್ ಕಿಟ್, ಸ್ಕಾಲರ್ಶಿಪ್, ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಅರ್ಹತೆ ಮೇರೆಗೆ ವಿವಿಧ ಸೌಲಭ್ಯಗಳು, ವಿವಾಹಕ್ಕೆ ಸಹಾಯಧನ ದೊರೆಯುತ್ತಿದೆ.
ಈ ಕಾರ್ಡ್ ಪಡೆಯಲು ಕಟ್ಟಡ ಕಾರ್ಮಿಕರು ನೋಂದಣಿಗೆ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ಆದರೆ ಖಾಸಗಿ ವ್ಯಕ್ತಿಗಳು ಸಾರ್ವಜನಿಕವಾಗಿ ಕೇಂದ್ರವನ್ನು ತೆರೆದು ಕಾರ್ಮಿಕರ ಕಾರ್ಡ್ ಬಂದಿದೆ ಎಂದು ಸಾರ್ವಜನಿಕರಿಗೆ ಕರೆ ಮಾಡುತ್ತಿದ್ದು, ಪ್ರತಿ ಕಾರ್ಡ್ಗೆ 100 ರೂ ಹಣ ಸಂಗ್ರಹಿಸುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದಿದೆ.
ಇವರ ಬಳಿ ಸಾವಿರಾರು ಕಾರ್ಡ್ಗಳು ಇದ್ದು, ದೊಡ್ಡಬಳ್ಳಾಪುರ ತಾಲೂಕಿನಲ್ಲಿಯೇ ಲಕ್ಷಾಂತರ ರೂ ಹಣ ವಸೂಲಿ ದಂದೆಗೆ ಇಳಿದ್ದಿದ್ದಾರೆ ಎನ್ನಲಾಗುತ್ತಿದೆ.
ಇನ್ನೂ ಈ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಕಾರ್ಮಿಕ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ ನಡೆಸಿ, ಹಣ ವಸೂಲಿ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು, ಇವರಿಗೆ ಅನುಮತಿ ನೀಡಿದವರು ಯಾರು..? ಮೊಬೈಲ್ ಸಂಖ್ಯೆ ಸೇರಿದಂತೆ ಸಾರ್ವಜನಿಕರ ಗೌಪ್ಯ ದಾಖಲೆ ನೀಡಿದವರು ಯಾರು ಎಂಬ ಕುರಿತು ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.