ಕೆ.ಎಂ. ಸಂತೋಷ್, ಆರೂಢಿ (ದೊಡ್ಡಬಳ್ಳಾಪುರ): ಹೋಟೆಲ್ ಮುಚ್ಚಿದೆ, ದೋಸೆ ಸಿಗಲ್ಲ, ಬಿರಿಯಾನಿ ಸಿಗಲ್ಲ ಅನ್ನೋದು ಬೆಂಗಳೂರಿನವರ ಸಮಸ್ಯೆ. ಆದರೆ ದೊಡ್ಡಬಳ್ಳಾಪುರದಲ್ಲಿ ಗೃಹಬಳಕೆಯ LPG ಗ್ಯಾಸ್ ಸಿಲಿಂಡರ್ ಬುಕ್ ಮಾಡೋಕೇ ಆಗ್ತಾ ಇಲ್ಲ. App ಹೊಸ ಬುಕಿಂಗ್ ತಗೊಳ್ತಾ ಇಲ್ಲ. ಯು*ದ್ಧ ಹೀಗೆ ಮುಂದುವರೆದರೆ ಏನೇನು ಆಗುತ್ತೋ ಎಂಬ ಪ್ರಶ್ನೆ ಎದುರಾಗಿದೆ.
ಹೌದು ವಾಣಿಜ್ಯ ಸಿಲಿಂಡರ್ ಪರದಾಟದ ಬೆನ್ನಲ್ಲೇ ಗೃಹ ಬಳಕೆ ಸಿಲಿಂಡರ್ ಬುಕಿಂಗ್ ವ್ಯವಸ್ಥೆ ಸ್ಥಗಿತಗೊಳಿಸಿರುವ ಆರೋಪ ಕೇಳಿಬಂದಿದ್ದು, ಗ್ರಾಹಕರು ಆತಂಕಕ್ಕೆ ಒಳಗಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಎಸ್ಮಾ ಜಾರಿ ಮಾಡಿದೆ, LPG ವಿತರಣೆಗೆ ತೊಂದರೆ ಇಲ್ಲ ಎಂದರೆ, ಆಹಾರ ಇಲಾಖೆ ಸಚಿವ ಮುನಿಯಪ್ಪ ಅವರು ಕೂಡ ಅಡುಗೆ ಅನಿಲ ಸಮಸ್ಯೆ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಆದರೆ ಗೃಹ ಬಳಕೆ ಅಡುಗೆ ಅನಿಲ ಬುಕ್ ಮಾಡಲು ಸಾಧ್ಯವಿಲ್ಲವಾಗಿದ್ದು, ಬುಕಿಂಗ್ ಸಂಖ್ಯೆಗೆ ಕರೆ ಮಾಡಿದರೆ ಕರೆ ಕಟ್ ಆಗುವುದು, ಸ್ವಿಚ್ ಆಫ್ ಎನ್ನುವುದು, ತಾಂತ್ರಿಕ ಸಮಸ್ಯೆ ಎಂಬ ಸಂದೇಶ ಕೇಳಿ ಬರುತ್ತಿದೆ.
ಈಗಾಗಲೇ ಎಲ್‌ಪಿಜಿ ಸಮಸ್ಯೆ ದೇಶಾದ್ಯಂತ ತೀವ್ರವಾಗಿದ್ದು, ಸಿಲಿಂಡರ್ ಹಿಡಿದು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಕಂಡುಬರುತ್ತಿದೆ.
ಸಮಸ್ಯೆ ಬಗೆಹರಿಸಬೇಕಾದ ಪ್ರಧಾನಿ ಮೋದಿ ಅವರು ಕೇರಳ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಮತ್ತೊಂದೆ ಯುದ್ಧದ ಪರಿಣಾಮಗಳ ಕುರಿತು ಕೇಂದ್ರದ ವಿವಿಧ ಸಚಿವಾಲಯಗಳು ಸುದ್ದಿಗೋಷ್ಠಿ ನಡೆಸಿವೆ. ಆದರೆ ಮಾಧ್ಯಮಗಳ ಪ್ರಶ್ನೆ ಸ್ವೀಕರಿಸುವುದಿಲ್ಲ ಎಂದು ಷರತ್ತು ವಿಧಿಸಿದ್ದು, ಈಗ ದೇಶದ ಜನರ ಕಷ್ಟ ಹೇಳುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ.