
ನವದೆಹಲಿ: ಎರಡು ದಿನಗಳ ದೆಹಲಿ ಪ್ರವಾಸದಲ್ಲಿ ಬೆಂಗಳೂರು ನಗರದ ಅಭಿವೃದ್ಧಿ ವಿಚಾರವಾಗಿ ಕೇಂದ್ರ ಸಚಿವರು, ವಿವಿಧ ರಾಜ್ಯಗಳ ಚುನಾವಣೆ ಬಗ್ಗೆ ಹೈಕಮಾಂಡ್ ನಾಯಕರ ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಿಳಿಸಿದರು.
ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ರಾತ್ರಿ ಪ್ರತಿಕ್ರಿಯೆ ನೀಡಿದರು.
ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿ ವಿಚಾರವಾಗಿ ಕೇಳಿದಾಗ, “ಅವರು ಎಐಸಿಸಿ ಅಧ್ಯಕ್ಷರು, ನಾನು ಕೆಪಿಸಿಸಿ ಅಧ್ಯಕ್ಷ. ನಾನು ನಮ್ಮ ಅಧ್ಯಕ್ಷರನ್ನು ಭೇಟಿ ಮಾಡದೇ ಬೇರೆ ಯಾರು ಭೇಟಿ ಮಾಡುತ್ತಾರೆ. ಪಕ್ಷ ನನಗೆ ಕೇರಳ, ಅಸ್ಸಾಂ ಹಾಗೂ ತಮಿಳುನಾಡು ಚುನಾವಣೆ ಪ್ರಚಾರದ ಜವಾಬ್ದಾರಿ ವಹಿಸಿತ್ತು. ನಾನು ಅಲ್ಲಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದೆ, ರಾಹುಲ್ ಗಾಂಧಿ ಅವರ ಪ್ರಚಾರದಲ್ಲೂ ಭಾಗಿಯಾಗಿದ್ದೆ. ನಮ್ಮ ರಾಜ್ಯದಲ್ಲೂ ಉಪಚುನಾವಣೆ ನಡೆದಿದೆ. ಅಸ್ಸಾಂಗೆ ನಾನು ಕೊನೆ ದಿನ ಮತ್ತೊಮ್ಮೆ ಹೋಗಬೇಕಿದೆ.
ಕಟ್ಟಡ ಎತ್ತರ ನಿರ್ಬಂಧ, ಟಿಡಿಆರ್, ಪ್ರೀಮಿಯಂ ಎಫ್ಎಆರ್ ಬಗ್ಗೆ ಚರ್ಚೆ
ಕೇಂದ್ರ ಸಚಿವರ ಭೇಟಿ ಬಗ್ಗೆ ಕೇಳಿದಾಗ, “ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿಗೆ ರಕ್ಷಣಾ ಇಲಾಖೆಯ ಜಾಗಗಳ ಅಗತ್ಯವಿದೆ. ಈ ವಿಚಾರವಾಗಿ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದೆ. ಸ್ಕೈಡೆಕ್ ಯೋಜನೆಗೆ ರಕ್ಷಣಾ ವಿಮಾನ ನಿಲ್ದಾಣ ಹೆಚ್ಎಎಲ್ ನಿಂದ ಅಡ್ಡಿ ಎದುರಾಗಿತ್ತು. ಪ್ರೀಮಿಯಂ ಎಫ್ಎಆರ್ ವಿಚಾರವಾಗಿ ಚರ್ಚೆ ಮಾಡಿದೆ. ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಯಲ್ಲಿ ಭೂಮಿ ಕಳೆದುಕೊಳ್ಳುವವರು ಟಿಡಿಆರ್ ಹಾಗೂ ಎಫ್ಎ ಆರ್ ಪಡೆಯುವವರಿಗೆ ನಿರ್ಬಂಧ ಹೇರಲಾಗಿತ್ತು. ಹೀಗಾಗಿ ಇವರಿಗೆ ಅನುಕೂಲವಾಗಲು ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಸಿದ್ದೇವೆ. ಕಳೆದ ಬಾರಿ ದೆಹಲಿಗೆ ಬಂದಾಗ ನಾಗರಿಕ ವಿಮಾನಯಾನ ಸಚಿವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೆ” ಎಂದರು.
1,082 ನಗರಾಭಿವೃದ್ಧಿ ಯೋಜನೆಗಳ ಪ್ರಸ್ತಾವನೆ ಸಲ್ಲಿಕೆ
ಕೇಂದ್ರ ನಾಗರಾಭಿವೃದ್ಧಿ ಸಚಿವರಾದ ಮನೋಹರ್ ಲಾಲ್ ಖಟ್ಟರ್ ಅವರು ಅರ್ಬನ್ ಚಾಲೆಂಜ್ ಫಂಡ್ ಮೂಲಕ ನಗರಾಭಿವೃದ್ಧಿಗೆ 1 ಲಕ್ಷ ಕೋಟಿ ಹಣ ಮೀಸಲಿಟ್ಟಿದ್ದು, ನಮ್ಮ ರಾಜ್ಯದ ಎಲ್ಲಾ ನಗರಗಳಿಗೂ ಸೇರಿ ₹5 ಸಾವಿರ ಕೋಟಿ ಹಣ ಮೀಸಲಿಟ್ಟಿದ್ದಾರೆ. ಇದಕ್ಕೆ ಕೆಲವು ಮಾನದಂಡ ನಿಗದಿ ಮಾಡಿದ್ದು, ನಮ್ಮ ರಾಜ್ಯದಿಂದ 1,082 ಯೋಜನೆಗಳ ಪ್ರಸ್ತಾವನೆ ಅವರ ಮುಂದೆ ಇರಿಸಿದ್ದೇವೆ.
1.25 ಲಕ್ಷ ಕೋಟಿ ಮೊತ್ತದ ಯೋಜನೆಗಳ ಪ್ರಸ್ತಾವನೆ ಸಲ್ಲಿಸಿದ್ದು, ಕೇಂದ್ರ ಸರ್ಕಾರ ಸುಮಾರು 32- 35 ಸಾವಿರ ಕೋಟಿ ಪಾಲು ನೀಡಬೇಕಿದೆ. ಹೀಗಾಗಿ 5 ಸಾವಿರ ಕೋಟಿಗಿಂತ ಹೆಚ್ಚಿನ ಹಣ ನೀಡಬೇಕು ಎಂದು ಕೇಳಿದ್ದೇನೆ. ಬೇರೆ ರಾಜ್ಯದವರು ಈ ಅನುದಾನ ಪಡೆಯದಿದ್ದರೆ ನಾವು ಪಡೆಯಲು ಸಿದ್ಧವಿದ್ದೇವೆ ಎಂದು ಹೇಳಿದ್ದೇನೆ. ಅವರು ನೋಡೋಣ ಎಂದಿದ್ದಾರೆ. ನಾನು, ರಹೀಮ್ ಖಾನ್ ಹಾಗೂ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸದ್ದೇವೆ.
ಹುಡ್ಕೋ ವತಿಯಿಂದ 50% ಸಾಲ ನೀಡಲು ನಿರ್ಧರಿಸಿದ್ದಾರೆ. ಕೇಂದ್ರ ಸರ್ಕಾರ 25% ಹಾಗೂ ರಾಜ್ಯ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆ 25% ವೆಚ್ಚ ಭರಿಸಬೇಕಿದೆ. ಈ ಅವಕಾಶ ಬಿಡಬಾರದು ಎಂದು ಪ್ರಸ್ತಾವನೆ ಸಲ್ಲಿಸಿದ್ದೇವೆ” ಎಂದು ವಿವರಿಸಿದರು.
ದೊಡ್ಡಬಳ್ಳಾಪುರ: ಕ್ಯಾಂಟರ್- KSRTC ಬಸ್ ನಡುವೆ ಅಪಘಾತ.. ತಪ್ಪಿದ ಪ್ರಮಾದ

ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಕ್ಯಾಂಟರ್ (Canter) ಹಾಗೂ ಕೆಎಸ್ಆರ್ಟಿಸಿ (KSRTC) ಬಸ್ ನಡುವೆ ಡಿಕ್ಕಿ ಸಂಭವಿಸಿದ್ದು (Accident), ಅದೃಷ್ಟವಶಾತ್ ಪ್ರಯಾಣಿಕರು ಪಾರಾಗಿದ್ದಾರೆ.
ಇಂದು ಬೆಳಗ್ಗೆ 6.45 ರ ಸುಮಾರಿನಲ್ಲಿ ಬಾಶೆಟ್ಟಿಹಳ್ಳಿ ಹೊರವಲಯದಲ್ಲಿರುವ ಬ್ಯಾಂಕ್ ಸರ್ಕಲ್ ಬಳಿ ಎಳ್ಳುಪುರದ ಕಡೆಯಿಂದ ಬಂದ ಟ್ಯಾಂಕರ್ ಹಾಗೂ ದೊಡ್ಡಬಳ್ಳಾಪುರ ಕಡೆಯಿಂದ ಬಂದ ಎಸ್ಆರ್ಟಿಸಿ (KSRTC) ಬಸ್ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕ್ಯಾಂಟರ್ ಮುಂದೆ ಸಾಗಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕುಹೊಡೆದಿದ್ದು, ವಿದ್ಯುತ್ ಕಂಬ ಮುರಿದು ಬಿದ್ದಿದೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿದೆ.
ಕೀಲು ಬದಲಿ ಶಸ್ತ್ರಚಿಕಿತ್ಸೆಗೆ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯನ್ನು ಪರಿಗಣಿಸಿ: ರಾಜಘಟ್ಟರವಿ ಆಗ್ರಹ

ದೊಡ್ಡಬಳ್ಳಾಪುರ: ಮೊಣಕಾಲು ಹಾಗೂ ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆ (Joint replacement surgery) ನಡೆಸಲು ದೊಡ್ಡಬಳ್ಳಾಪುರ ಸರಕಾರಿ ಆಸ್ಪತ್ರೆಯನ್ನು ಪರಿಗಣಿಸಬೇಕೆಂದು ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ ಆಗ್ರಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಖಾಸಗಿ ಸೌಲಭ್ಯಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮತ್ತು ರೋಗಿಗಳ ಮನೆಗೆ ಹತ್ತಿರದಲ್ಲಿ ಕೈಗೆಟುಕುವ ಆರೈಕೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಮೂಳೆ ಶಸ್ತ್ರಚಿಕಿತ್ಸೆಗಳನ್ನು ಮಾಡುವ ಸಾರ್ವಜನಿಕ ಆಸ್ಪತ್ರೆಗಳನ್ನು ಅಗತ್ಯ ಮೂಲಸೌಕರ್ಯಗಳೊಂದಿಗೆ ಬಲಪಡಿಸಲಾಗುತ್ತಿರುವುದು ಪ್ರಶಂಸನೀಯ.
ಶಸ್ತ್ರಚಿಕಿತ್ಸೆ ನಡೆಸುತ್ತಿರುವ ಆಸ್ಪತ್ರೆಗಳ ಪಟ್ಟಿಯಲ್ಲಿ 13 ಜಿಲ್ಲಾ ಆಸ್ಪತ್ರೆಗಳು, 8 ತಾಲ್ಲೂಕು ಆಸತ್ರೆಗಳೂ ಸೇರಿವೆ. ಸರಕಾರಿ ಆಸತ್ರೆಗಳಲ್ಲಿ ಶಸ್ತ್ರಚಿಕಿತ್ಸೆಯ ಪಾಲು ಶೇ. 35ರಿಂದ ಶೇ.99ಕ್ಕೆ ಏರಿಕೆಯಾಗಿದೆ. ಈಗ ರೋಗಿಗಳು, ಮನೆಯ ಹತ್ತಿರವೇ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಆದರೆ ದೊಡ್ಡಬಳ್ಳಾಪುರದ ಆಸ್ಪತ್ರೆ ಈ ಪಟ್ಟಿಗೆ ಸೇರಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ.
ಆರೋಗ್ಯ ಸಚಿವರ ಈ ಹೇಳಿಕೆ ಪ್ರಶಂಸನೀಯವಾದರೂ, ಈ ಸೌಲಭ್ಯದಿಂದ ದೊಡ್ಡಬಳ್ಳಾಪುರ ತಾಲ್ಲೂಕು ವಂಚಿತವಾಗಿರುವುದು ಬೇಸರವಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆಗೂ ಹೆಚ್ಚಿನದಾಗಿ ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆ ಸೌಲಭ್ಯ ನೀಡುತ್ತಿದೆ. ಆದಾಗ್ಯೂ ನಮ್ಮದು ಶಾಪಗ್ರಸ್ತ ತಾಲ್ಲೂಕು ದೊಡ್ಡಬಳ್ಳಾಪುರ ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ಸರ್ಕಾರಿ ಆಸ್ಪತ್ರೆ ತಾಲೂಕು ಆಸ್ಪತ್ರೆಯಾದರು ಸಹ ಅದು ತನ್ನ ಇತಿಮಿತಿಗಳನ್ನು ಮೀರಿ ಕಾರ್ಯ ನಿರ್ವಹಿಸುತ್ತ ಬಂದಿದೆ. ಪ್ರತಿದಿನ ಸರಿ ಸುಮಾರು ಸಾವಿರಕ್ಕೂ ಹೆಚ್ಚು ಹೊರ ರೋಗಿಗಳಿಗೆ ಆರೋಗ್ಯ ಸೌಲಭ್ಯಗಳನ್ನು ನೀಡುತ್ತಿದೆ.
ನಮ್ಮ ಸುತ್ತಮುತ್ತಲಿನ ತಾಲೂಕುಗಳಾದ ದೇವನಹಳ್ಳಿ, ನೆಲಮಂಗಲ,ಗೌರಿಬಿದನೂರು ಸೇರಿದಂತೆ ಇತರೆ ತಾಲೂಕುಗಳ ರೋಗಿಗಳು ಕೂಡ ಆರೋಗ್ಯ ಸೌಲಭ್ಯ ಪಡೆಯುತ್ತಿದ್ದಾರೆ. ತಿಂಗಳಿಗೆ ನೂರಾರು ಶಸ್ತ್ರಚಿಕಿತ್ಸೆ ಕೂಡ ನಡೆಯುತ್ತಿದೆ, ಈ ಎಲ್ಲಾ ವಿಷಯಗಳು ಅಂಕಿ ಅಂಶಗಳಿಂದ ಸಾಬೀತಾಗಿದೆ. ಆದ್ದರಿಂದಲೆ ರಾಷ್ಟ್ರ ಪ್ರಶಸ್ತಿ ಕೂಡ ಸಂದಿದೆ.
ಇಷ್ಟೆಲ್ಲಾ ಸೌಲಭ್ಯ ಒದಗಿಸಿ, ಉತ್ತಮ ಹೆಸರು ಗಳಿಸಿರುವ ನಮ್ಮ ತಾಲೂಕು ಆಸ್ಪತ್ರೆಗೆ ಕೀಲು ಬದಲಿ ಶಸ್ತ್ರಚಿಕಿತ್ಸೆ ಸೌಲಭ್ಯ ವಂಚಿತವಾಗಿರುವುದು ಬಹಳ ಬೇಸರದ ಸಂಗತಿ. ಈ ಮೇಲ್ಕಂಡ ಎಲ್ಲಾ ಅಂಶಗಳನ್ನು ಪರಿಗಣಿಸಿ ಆರೋಗ್ಯ ಸಚಿವರು ಈ ಕೂಡಲೆ ದೊಡ್ಡಬಳ್ಳಾಪುರ ತಾಲೂಕನ್ನು ಕೂಡ ಪರಿಗಣಿಸಬೇಕೆಂದು ಆಗ್ರಹಿಸಿದರು.

