ಬೆಂಗಳೂರು: “ಯಾವಾಗ ಏನು ಆಗಬೇಕೋ ಅದು ಆಗುತ್ತದೆ. ಇನ್ನು ಮುಂದೆ ರಾಜಕೀಯ ವಿಚಾರವಾಗಿ ನಾನು ಮಾಧ್ಯಮಗಳ ಮುಂದೆ ಮಾತನಾಡುವುದಿಲ್ಲ. ಸಮಯ ಬಂದಾಗ ತಾನಾಗಿಯೇ ಗೊತ್ತಾಗುತ್ತದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ತಿಳಿಸಿದರು.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಭಾನುವಾರ ಪ್ರತಿಕ್ರಿಯೆ ನೀಡಿದರು.
ದೆಹಲಿ ಪ್ರವಾಸದ ಬಗ್ಗೆ ಕೇಳಿದಾಗ, “ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ. ಯಾವ ರಾಜಕೀಯವೂ ಇಲ್ಲ. ಏನೇನೂ ತೀರ್ಮಾನ ಆಗಿವೆಯೋ ಅವು ಚಾಲ್ತಿಗೆ ಬರಲಿವೆ” ಎಂದು ಸ್ಪಷ್ಟಪಡಿಸಿದರು.
ಪಕ್ಷದ ಮೇಲೆ ನಮಗೆ ವಿಶ್ವಾಸವಿದೆ
ಪಕ್ಷದಲ್ಲಿ ಗೊಂದಲಗಳು ಇವೆ ಎಂಬ ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಮ್ಮ ಪಾರ್ಟಿಯಲ್ಲಿ ಯಾವ ಸಮಯದಲ್ಲಿ ಏನು ಮಾಡಬೇಕೋ ಅದನ್ನು ಪಕ್ಷ ಮಾಡುತ್ತದೆ. ನಮಗೆ ನಮ್ಮ ಪಕ್ಷದ ಮೇಲೆ ವಿಶ್ವಾಸ ಇದೆ. ಏನು ಮಾಡಬೇಕು ಎಂಬುದು ಅವರಿಗೆ ಗೊತ್ತಿದೆ” ಎಂದು ತಿಳಿಸಿದರು.
ಪಕ್ಷದ ತೀರ್ಮಾನ ಪಾಲಿಸುತ್ತೇವೆ
ನಾಯಕತ್ವ ಬದಲಾವಣೆ ವಿಚಾರವಾಗಿ ಕೇಳಿದಾಗ, “ನಿಮಗೆ ಈ ಬಗ್ಗೆ ಗೊಂದಲ ಇರಬಹುದು. ನಾನು ಈ ಬಗ್ಗೆ ಯಾವತ್ತು ಚರ್ಚೆ ಮಾಡಲ್ಲ. ಹೈಕಮಾಂಡ್ ಯಾವಾಗ ಯಾವ ಸೂಚನೆ ನೀಡುತ್ತದೆಯೋ ಆವಾಗ ಅದನ್ನು ಪಾಲಿಸುತ್ತೇವೆ ಎಂದು ನಾನು ಹಾಗೂ ಸಿಎಂ ಅವರು ಹೇಳಿದ್ದು, ಅದರಂತೆ ನಡೆಯುತ್ತೇವೆ” ಎಂದು ತಿಳಿಸಿದರು.
ಹುಟ್ಟುಹಬ್ಬಕ್ಕೆ ಫ್ಲೆಕ್ಸ್, ಬ್ಯಾನರ್ ಹಾಕಬೇಡಿ
ಮೇ 15 ರಂದು ಹುಟ್ಟುಹಬ್ಬಕ್ಕೆ ಶುಭ ಸುದ್ದಿ ಸಿಗುತ್ತಾ ಎಂದು ಕೇಳಿದಾಗ, “ನನ್ನ ಜನ್ಮದಿನದಂದು ಯಾರೂ ಫ್ಲೆಕ್ಸ್ ಹಾಗೂ ಬ್ಯಾನರ್ ಗಳನ್ನು ಹಾಕುವಂತಿಲ್ಲ. ಹಾಕಿದರೆ ಅವರ ವಿರುದ್ಧ ಪಾಲಿಕೆ ವತಿಯಿಂದ ಕ್ರಮ ಜರುಗಿಸಲು ಸೂಚಿಸುತ್ತೇನೆ. ಅವಶ್ಯಕತೆ ಇದ್ದಲ್ಲಿ ಹಣ ಪಾವತಿಸಿ ಜಾಹೀರಾತು ಕೊಡಬಹುದು. ರಸ್ತೆಯಲ್ಲಿ ಫ್ಲೆಕ್ಸ್ ಹಾಕಿ ರಸ್ತೆಯ ಸೌಂದರ್ಯ ಹಾಳು ಮಾಡಬಾರದು. ಇದು ನಾನು ಎಲ್ಲರಿಗೂ ಕೊಡುತ್ತಿರುವ ಸೂಚನೆ. ಅನಧಿಕೃತವಾಗಿ ರಸ್ತೆಯಲ್ಲಿ ಫ್ಲೆಕ್ಸ್ ಹಾಕಿದರೆ ದುಬಾರಿ ದಂಡ ವಿಧಿಸಿ ಎಂದು ಆಯುಕ್ತರಿಗೆ ಸೂಚಿಸಿದ್ದೇನೆ” ಎಂದು ತಿಳಿಸಿದರು.
ಕೊಟ್ಟ ಮಾತಿನಂತೆ ಒಳಮೀಸಲಾತಿ ನೀಡಿದ್ದೇವೆ
ಒಳಮೀಸಲಾತಿ ವಿಚಾರವಾಗಿ ಬಿಜೆಪಿ ಟೀಕೆ ಬಗ್ಗೆ ಕೇಳಿದಾಗ, “ಬಿಜೆಪಿಯವರ ಕೈಯಲ್ಲಿ ಏನೂ ಮಾಡಲು ಆಗಿಲ್ಲ. ನಾವೇನು ಮಾತು ಕೊಟ್ಟಿದೆವೋ ಆ ಮಾತಿನ ಪ್ರಕಾರ ನಡೆದಿದ್ದೇವೆ. ಹಿಂದೆ 17% ಇದ್ದಾಗಲೂ ಕೂಡ ನಾವು ಸರಿಯಾಗಿಯೇ ಮಾಡಿದ್ದೆವು. ಈಗಲೂ ಕೂಡ ಬಹಳ ಸರಳವಾಗಿ ಮಾಡಿದ್ದೇವೆ. ಬಲ ಹಾಗೂ ಎಡ ಪಂಗಡಗಳಲ್ಲಿ ಮೊದಲು ಯಾರಿಗೆ, ನಂತರ ಯಾರಿಗೆ ಎಂಬ ಪ್ರಶ್ನೆ ಇತ್ತು. ಅದಕ್ಕೆ ಬೇಕಾದ ಪರಿಹಾರ ದಾರಿ ಕಂಡು ಹಿಡಿಯಲಾಗಿದೆ. ಬಲವಿರಲಿ, ಎಡವಿರಲಿ, ಲಂಬಾಣಿ ಇರಲಿ, ಬೋವಿ ಇರಲಿ ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸವನ್ನು ನಮ್ಮ ಸರಕಾರ ಮಾಡಿದೆ. 30- 40 ವರ್ಷಗಳಿಂದ ಇದ್ದಂತಹ ಸಮಸ್ಯೆಯನ್ನು ನಾವು ಈಡೇರಿಸಿದ್ದೇವೆ. ಎಲ್ಲರಿಗೂ ನ್ಯಾಯ ಕೊಡುತ್ತಿದ್ದೇವೆ ಎಲ್ಲರೂ ಒಟ್ಟಾಗಿ ಹೋಗಬೇಕು ಅಷ್ಟೇ” ಎಂದರು.
ಬಿಎಸ್ ವೈ ಅಭಿಮಾನೋತ್ಸವ ಕಾರ್ಯಕ್ರಮದ ಬಗ್ಗೆ ಕೇಳಿದಾಗ, “ರಾಜಕೀಯಕ್ಕೆ ವಿದಾಯ ಹೇಳಬೇಕಲ್ಲವೇ, ಅವರ ಸಾಧನೆಗಳನ್ನು ವಿದಾಯವನ್ನು ಅವರು ಹೇಳಬೇಕಲ್ಲವೇ ಅದಕ್ಕೆ ಈ ಕಾರ್ಯಕ್ರಮ ಮಾಡುತ್ತಿದ್ದಾರೆ. ಅವರ ಪಕ್ಷಕ್ಕೆ ಏನಾದರೂ ಕೊಡುಗೆ ಕೊಡಬೇಕಲ್ವಾ ಅದಕ್ಕಾಗಿ ಮಾಡುತ್ತಿದ್ದಾರೆ” ಎಂದು ಹೇಳಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸದಿದ್ದರೆ ಕಂಟೆಂಪ್ಟ್ ಮೂವ್ ಮಾಡುತ್ತೇವೆ ಎಂಬ ಎ.ಪಿ. ರಂಗನಾಥ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಮೊದಲು ಮಾಡಲಿ ಯಾರು ಬೇಡ ಅಂತಿದ್ದಾರೆ? ನಾವೇನು ಚುನಾವಣೆ ಮಾಡೋದಿಲ್ಲ ಅಂತ ಹೇಳಿದ್ದೇವಾ? ಕಾರ್ಪೊರೇಷನ್ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ನಾವು ಸಿದ್ಧರಿದ್ದೇವೆ” ಎಂದು ಸ್ಪಷ್ಟಪಡಿಸಿದರು.

