ಚಿತ್ರದುರ್ಗ: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಏನೆಲ್ಲಾ ನಡೆಯಿತು ಎಂಬುದನ್ನು ನೋಡಿದ್ದೇವೆ. ಒಂದು ನಿರ್ದಿಷ್ಟ ಸಮುದಾಯವನ್ನು ಕಾಂಗ್ರೆಸ್ ಯಾವ ರೀತಿ ಅಪಮಾನಿಸಿ ಶಂಕಿಸಿ ನೋಡಿತು ಎಂಬುದನ್ನು ಕೂಡ ಕಂಡಿದ್ದೇವೆ. ವಾಸ್ತವ ಸ್ಥಿತಿ ಈಗಿರುವಾಗ ಯಾವ ಮುಖ ಇಟ್ಟುಕೊಂಡು ಕಾಂಗ್ರೆಸ್ ಪಕ್ಷವು ಹುಬ್ಬಳ್ಳಿಯಲ್ಲಿ ಅಹಿಂದ ಸಮಾವೇಶ ಮಾಡುತ್ತದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಪ್ರಶ್ನಿಸಿದರು.
ಚಿತ್ರದುರ್ಗದಲ್ಲಿ ಹೊಳಲ್ಕೆರೆ ಶಾಸಕ ಚಂದ್ರಪ್ಪ ಅವರ ಪುತ್ರನ ಆರತಕ್ಷತೆ ಕಾರ್ಯಕ್ರಮ ಮುಗಿದ ನಂತರ ತಮ್ಮನ ಭೇಟಿಯಾದ ಮಾಧ್ಯಮ ಪ್ರತಿನಿಧಿಗಳ ಜತೆ ಕೇಂದ್ರ ಸಚಿವರು ಮಾತನಾಡಿದರು.
ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಪಕ್ಷ ಅಹಿಂದ ಸಮಾವೇಶ ಮಾಡುತ್ತಿದೆ ಎಂದು ಸುದ್ದಿಗಾರರು ಗಮನ ಸೆಳೆದಾಗ ಕೇಂದ್ರ ಸಚಿವರು ಹೇಳಿದ್ದಿಷ್ಟು; ಕುರ್ಚಿ ಉಳಿಸಿಕೊಳ್ಳಲು ಅಹಿಂದ ಸಮಾವೇಶ ಮಾಡಲು ಹೊರಟಿದ್ದಾರೆ. ನಮ್ಮ ಭಿಕ್ಷೆಯಿಂದ ಕಾಂಗ್ರೆಸ್ ಗೆ ಅಧಿಕಾರ ಸಿಕ್ಕಿದೆ ಎಂದು ಅಹಿಂದ ವರ್ಗದ ಜನ ಹೇಳುತ್ತಿದ್ದಾರೆ. ಆಮೇಲೆ, ದಾವಣಗೆರೆಯಲ್ಲಿ ಅದೇ ಅಹಿಂದ ವರ್ಗವನ್ನು ಕಾಂಗ್ರೆಸ್ ಅಪಮಾನಕರವಾಗಿ ನಡೆಸಿಕೊಂಡಿದೆ. ದಿನವೂ ಮಾಧ್ಯಮಗಳಲ್ಲಿ ಅದುವೇ ಸುದ್ದಿ ಆಗುತ್ತಿದೆ. ಈ ಪರಿಸ್ಥಿಯಲ್ಲಿ ಅಹಿಂದ ಸಮಾವೇಶ ಮಾಡುತ್ತಿದ್ದಾರೆ. ದುಡ್ಡು ಖರ್ಚು ಮಾಡಿ ಜನ ಸೇರಿಸುತ್ತಾರೆ ಎಂದು ಕೇಂದ್ರ ಸಚಿವರು ಟೀಕಾಪ್ರಹಾರ ನಡೆಸಿದರು.
ಜಿಬಿಎ ಚುನಾವಣೆಗೆ ಹಣವಿಲ್ಲ, ಸಿಬ್ಬಂದಿತಯೂ ಇಲ್ಲ ಎಂದು ಚುನಾವಣೆ ಆಯೋಗ ಕೋರ್ಟ್ ಗೆ ತಿಳಿಸಿದೆ. ರಾಜ್ಯ ಸರ್ಕಾರವೇ ಚುನಾವಣೆ ಕಮಿಷನ್ ಮೂಲಕ ನ್ಯಾಯಾಲಯಕ್ಕೆ ತಿಳಿಸಿದೆ. ಕಾಂಗ್ರೆಸ್ ಸರ್ಕಾರ ಬೆನ್ನು ತೋರಿಸಿ ಓಡಿಹೋಗುತ್ತಿದೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.
ಮೇ 9ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಯಡಿಯೂರಪ್ಪ ಅವರ ಅಭಿಮಾನೋತ್ಸವಕ್ಕೆ ಶುಭ ಕೋರಿದ ಕೇಂದ್ರ ಸಚಿವರು; ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಸಚಿವ ಸುಧಾಕರ್ ಅವರಿಗೆ ಏನಾಗಿದೆ? ರಾಜ್ಯದ ಜನತೆಗೆ ಮಾಹಿತಿ ಕೊಡಿ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವ ಸುಧಾಕರ್ ಅವರ ಆರೋಗ್ಯದ ಬಗ್ಗೆ ರಾಜ್ಯ ಸರ್ಕಾರ ಸರಿಯಾದ ಮಾಹಿತಿ ನೀಡಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಒತ್ತಾಯಿಸಿದರು.
ಸಚಿವ ಸುಧಾಕರ್ ಸಾವು ಬದುಕಿನ ಬಗ್ಗೆ ಹೋರಾಟ ಮಾಡುತ್ತಿದ್ದಾರೆ ಎಂದು ಇವರು ಹೇಳುತ್ತಿದ್ದಾರೆ. ಆದರೆ ಜನರೇ ಬೇರೆ ಮಾತನಾಡುತ್ತಿದ್ದಾರೆ. ಹಿರಿಯೂರು ಅಥವಾ ಬೇರೆ ಕ್ಷೇತ್ರದ ಬಗ್ಗೆ ಮಾತಾಡಲ್ಲ. ಆದರೆ, ಒಳಗೆ ಏನು ನಡೆಯುತ್ತಿದೆ ಎಂಬುದನ್ನು ನೋಡಬೇಕು. ಆ ವ್ಯಕ್ತಿ ಎಷ್ಟು ನೋವು ಅನುಭವಿಸುತ್ತಿದ್ದಾರೆ, ಯಾವ ಕಾರಣಕ್ಕೆ ಕೆಲ ವಿಷಯಗಳನ್ನು ಮುಚ್ಚಿಟ್ಟಿದ್ದಾರೆ? ಅವರಿಂದ ಹೆಬ್ಬೆಟ್ಟು ಒತ್ತಿಸಿಕೊಳ್ಳಲು ಎಲ್ಲಾ ವಿಷಯಗಳನ್ನು ಮುಚ್ಚಿಡಲಾಗಿದೆಯೇ? ಎಂಬುದರ ಬಗ್ಗೆ ರಾಜ್ಯ ಸರ್ಕಾರ ಹೇಳಬೇಕಾಗುತ್ತದೆ ಎಂದು ಅವರು ಹೇಳಿದರು.
ನಾನು ಹಲವಾರು ಸಂದರ್ಭಗಳಲ್ಲಿ ನೋಡಿದ್ದೇನೆ. ಯಾವ ಕಾರಣಕ್ಕೆ ಎಲ್ಲವನ್ನು ಮುಚ್ಚಿಡುತ್ತಿದ್ದಾರೆ ಎಂಬುದನ್ನು ಜನತೆಗೆ ಹೇಳುವ ಜವಾಬ್ದಾರಿ ಸರ್ಕಾರದ್ದು. ಇಂಥ ವಿಚಾರಗಳಲ್ಲಿ ನಾನು ಚರ್ಚೆ ಮಾಡಲ್ಲ. ಆದರೆ, ಕೆಲ ವ್ಯಕ್ತಿಗಳು ಇಂಥ ಸಮಯ ದುರ್ಬಳಕೆ ಮಾಡಿಕೊಳ್ಳುವಲ್ಲಿ ಎಕ್ಸ್ ಪರ್ಟ್ ಗಳಿದ್ದಾರೆ ಎಂದು ಕುಮಾರಸ್ವಾಮಿ ಅವರು ಮಾರ್ಮಿಕವಾಗಿ ಹೇಳಿದರು.
ಶಾಸಕ ಚಂದ್ರಪ್ಪ, ಚಿತ್ರದುರ್ಗ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಎಂ. ಜಯಣ್ಣ ಸೇರಿದಂತೆ ಹಲವಾರು ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.
ಇದಕ್ಕೂ ಮೊದಲು ಕೇಂದ್ರ ಸಚಿವರು ಹೊಳಲ್ಕೆರೆಯ ಶಾಸಕರಾದ ಚಂದ್ರಪ್ಪ ಅವರ ಪುತ್ರನ ಅರಥಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೂತನ ವಧುವರರಿಗೆ ಶುಭ ಹಾರೈಸಿದರು.

