ಬೆಂಗಳೂರು: ಮಧ್ಯವರ್ತಿಗಳು (Brokers) ಎಲ್ಲೆಡೆ ಇರುತ್ತಾರೆ ಆದರೆ ಅವರನ್ನು ಕಚೇರಿಯೊಳಗೆ ಬಿಟ್ಟುಕೊಳ್ಳದೇ ಹೊರಗೆ ಕಳಿಸಿ ಎಂದು
ಮುಖ್ಯಮಂತ್ರಿ ಸಿದ್ದರಾಮಯ್ಯ ( Cm Siddaramaiah) ಅಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಒಕ್ಕೂಟ ಸಂಘ ಬೆಂಗಳೂರು ಇವರ ವತಿಯಿಂದ ಇನ್ ಫೆಂಟ್ರಿ ರಸ್ತೆಯಲ್ಲಿರುವ KAS ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಹೊಸದಾಗಿ ನಿರ್ಮಿಸಿದ ಹೆಚ್ಚುವರಿ ಕೊಠಡಿಗಳನ್ನು ಉದ್ಘಾಟನೆ ಮಾಡಿ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ವಿಳಂಬ ಧೋರಣೆ ಕೂಡದು
ಅಧಿಕಾರಿಗಳು ಯಾವುದೇ ಕಾರಣಕ್ಕೂ ಮಾಡದೇ, ಶೀಘ್ರವಾಗಿ ಕಡತಗಳನ್ನು ವಿಲೇವಾರಿ ಮಾಡಬೇಕು. ವಿಳಂಬ ನೀತಿ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡುತ್ತದೆ ಎಂದರು.
ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ
ಕೆಎಎಸ್ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಪ್ರಾಮಾಣಿಕವಾಗಿ ಮಾಡಬೇಕು. ಕೆಎಎಸ್ ಅಧಿಕಾರಿಗಳ ಸಂಘಕ್ಕೆ ನೂರು ವರ್ಷಗಳ ಇತಿಹಾಸವಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ರಾಜ್ಯಕ್ಕೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಸಾಮಾಜಿಕ, ಆರ್ಥಿಕ , ಮೂಲಭೂತ ಸೌಕರ್ಯಗಳು,ಕೈಗಾರಿಕೆಗಳ ಬೆಳವಣಿಗೆಗೆ ಕಾರಣೀಭೂತಗಿದ್ದಾರೆ. ಅವರ ಕಾಲದಲ್ಲಿ ದಿವಾನರಾಗಿದ್ದವರು ಸಂಘದ ಅಧ್ಯಕ್ಷರಾಗಿದ್ದರು ಎನ್ನುವುದು ಈ ಸಂಘದ ಹೆಗ್ಗಳಿಕೆ ಎಂದರು. ಅವರೆಲ್ಲರೂ ದಕ್ಷ ಆಡಳಿತಕ್ಕೆ ನಮಗೆ ದಾರಿದೀಪವಾಗಿದ್ದಾರೆ ಎಂದರು.
ಜನರ ಹಿತವನ್ನು ಕಾಪಾಡುವುದು ನಮ್ಮ ಕರ್ತವ್ಯ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯಾಂಗ ಹಾಗೂ ಶಾಸಕಾಂಗ ಒಟ್ಟಾಗಿ ಕೆಲಸ ಮಾಡಬೇಕು. ಈ ಎರಡೂ ಜನರ ಪ್ರತಿನಿಧಿಗಳಾಗಿ ಜನರ ಹಿತವನ್ನು ಕಾಪಾಡುವುದು ನಮ್ಮ ಕರ್ತವ್ಯ ಎಂದರು.
ಅಧಿಕಾರಿಗಳಿಗೆ ಕಾನೂನಿನ ಅರಿವಿನ ಜೊತೆಗೆ ಸಾಮಾನ್ಯ ಜ್ಞಾನ, ಸಮಾಜದ ಬಗ್ಗೆ ಅರಿವು ಇರಬೇಕು
ನಿವೃತ್ತರಾಗುವವರೆಗೆ ಜನಸೇವೆಯಲ್ಲಿ ತೊಡಗಿಸಿಕೊಳ್ಳುವ ಅವಕಾಶವಿದೆ. ಅಸಮಾನತೆ ಇರುವ ಸಮಾಜದಲ್ಲಿ ದುರ್ಬಲ ವರ್ಗಕ್ಕೆ ಸ್ಪಂದಿಸಬೇಕು. ಅಧಿಕಾರಿಗಳಿಗೆ ಕಾನೂನಿನ ಅರಿವಿನ ಜೊತೆಗೆ ಸಾಮಾನ್ಯ ಜ್ಞಾನ, ಸಮಾಜದ ಬಗ್ಗೆ ಅರಿವು ಇರಬೇಕು. ಆಗ ಮಾತ್ರ ಜನರಿಗೆ ಸ್ಪಂದಿಸಲು ಸಾಧ್ಯ ಎಂದರು.
ಜನರ ಸಮಸ್ಯೆಗಳನ್ನು ಬಗೆಹರಿಸಿ
ನಮ್ಮ ಕೆಲಸವನ್ನು ನಾವು ಪ್ರೀತಿಸಬೇಕು. ಗ್ರಾಮೀಣ ಜನರನ್ನು ಪ್ರೀತಿಯಿಂದ ಮಾತನಾಡಿಸಿ ಅವರ ಸಮಸ್ಯೆ ಅರ್ಥೈಸಿಕೊಂಡು ಬಗೆಹರಿಸಿದರೆ ಅವರು ನಿಮ್ಮನ್ನು ಮರೆಯುವುದಿಲ್ಲ. ಮಧ್ಯವರ್ತಿಗಳ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ. ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ವರ್ಗಾಯಿಸಲಾಗುತ್ತಿದೆ ಎಂದರು.
ಜನಸೇವೆಗೆ ದೊರಕಿರುವ ಅವಕಾಶವನ್ನು ಸದುಪಯೋಗಿಸಿಕೊಳ್ಳಿ
ಸರ್ಕಾರ ರೂಪಿಸುವ ನೀತಿಗಳು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವಲ್ಲಿ ಅಧಿಕಾರಿಗಳ ಪಾತ್ರ ಹಿರಿದು. ಜನಸೇವೆಗೆ ದೊರಕಿರುವ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು. ತೃಪ್ತಿದಾಯಕವಾಗಿ ಕೆಲಸ ಮಾಡಿರುವುದಕ್ಕಿಂತ ದೊಡ್ಡ ಪ್ರಮಾಣಪತ್ರ ಇನ್ನೊಂದಿಲ್ಲ ಎಂದರು. ಈ ಬಗ್ಗೆ ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಜೀವನ ಸಾರ್ಥಕವಾಗಿ ಸೇವೆ ತೃಪಿಕರವಾಗಿ ಮಾಡಿದ್ದೇನೆ ಎಂಬ ಭಾವನೆ ನಿಮ್ಮಲ್ಲಿ ಇರಬೇಕು ಎಂದರು.
ಶ್ರೀಘ್ರವಾಗಿ ಪದೋನ್ನತಿ ಆಗಲಿದೆ; ಸಿಎಂ ಭರವಸೆ
ಪದೋನ್ನತಿ ಬಗ್ಗೆ ಕಂದಾಯ ಸಚಿವರು ಕಾರ್ಯೋನ್ಮುಖರಾಗಿದ್ದು, ಶ್ರೀಘ್ರವಾಗಿ ಪದೋನ್ನತಿ ಆಗಲಿದೆ. ಶೇ. 33% ಅಧಿಕಾರಿಗಳನ್ನು ಸಿಇಒಗಳಾಗಿ ಬಡ್ತಿ ನೀಡುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದರು.
ಕೆಎಎಸ್ ಅಧಿಕಾರಿಗಳ ಸಂಘದಲ್ಲಿ ಹೆಚ್ಚುವರಿಯಾಗಿ ಹನ್ನೊಂದು ಕೊಠಡಿಗಳನ್ನು ನಿರ್ಮಿಸಿದ್ದು, ಹೊರಭಾಗಗಳಿಂದ ಆಗಮಿಸುವ ಅಧಿಕಾರಿಗಳಿಗೆ ಉಪಯೋಗವಾಗಲಿದೆ.
ಕಂದಾಯ ಸಚಿವ ಕೃಷ್ಣಭೈರೇಗೌಡ, ಕೆಎಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಶಿವಸ್ವಾಮಿ, ಉಪಾಧ್ಯಕ್ಷ ಚನ್ನಬಸಪ್ಪ, ಕಾರ್ಯದರ್ಶಿ ಶಿವಕುಮಾರ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

