ಬೆಂಗಳೂರು: “ಕೇಂದ್ರ ಪರಿಸರ ಇಲಾಖೆಯವರು ದಂಡ ಹಾಗೂ ಮಿಟಿಗೇಷನ್ ಪ್ಲಾನ್ ಸೇರಿ 257 ಕೋಟಿ ರೂಪಾಯಿ ಹಣ ಸಂದಾಯ ಮಾಡಬೇಕು ಎಂದು ಸೂಚಿಸಿದ್ದಾರೆ. ಇಂದೇ ಈ ಹಣ ಪಾವತಿ ಮಾಡಿ ಎಂದು ಮಾರ್ಗದರ್ಶನ ನೀಡಿದ್ದೇನೆ. ಕಟ್ಟಿದ ಕೂಡಲೇ ಈ ವಾರದೊಳಗೆ ಎತ್ತಿನಹೊಳೆ ಕೆಲಸ ಪ್ರಾರಂಭ ಮಾಡಿ ಎಂದು ಗುತ್ತಿಗೆದಾರರಿಗೆ ಸೂಚಿಸಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ಹೇಳಿದರು.
ಎತ್ತಿನಹೊಳೆ, ಮೇಕೆದಾಟು, ಭದ್ರಾ ಮೇಲ್ದಂಡೆ ವಿಚಾರವಾಗಿ ವಿಧಾನಸೌಧದಲ್ಲಿ ನಡೆದ ಸಭೆಯ ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು.
“ತುಮಕೂರು ಭಾಗದಲ್ಲೂ ಭೂಸ್ವಾಧೀನಕ್ಕೆ ಸರ್ವೆ ನಡೆಸಲು ಕ್ರಮ ತೆಗೆದುಕೊಳ್ಳಲಾಗುವುದು. ಆದಷ್ಟು ಬೇಗ ಚಿಕ್ಕಬಳ್ಳಾಪುರ ಹಾಗೂ ಕೋಲಾರಕ್ಕೆ ನೀರನ್ನು ತೆಗೆದುಕೊಂಡು ಹೋಗಲಾಗುವುದು. ಎತ್ತಿನಹೊಳೆ ಯೋಜನೆಗೆ ಕೇಂದ್ರ ಪರಿಸರ ಇಲಾಖೆಯವರು ಒಂದಷ್ಟು ಷರತ್ತುಗಳನ್ನು ವಿಧಿಸಿ ಕಡತವನ್ನು ವಾಪಸ್ ಕಳುಹಿಸಿದ್ದರು. ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಗೆ ಬದಲಿ ಭೂಮಿಯನ್ನು ಹಸ್ತಾಂತರ ಮಾಡಲಾಗುತ್ತಿದೆ. ಶೇ 10 ರಷ್ಟು ಭೂಮಿ ವರ್ಗಾವಣೆ ಬಾಕಿಯಿತ್ತು. ಮುಂದಿನ ಒಂದು ವಾರದೊಳಗೆ ಈ ಪ್ರಕ್ರಿಯೆ ನಡೆಯಲಿದೆ” ಎಂದರು.
“ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಹಾಗೂ ಮೇಕೆದಾಟು ವಿಚಾರವಾಗಿ ಸಂಬಂಧಪಟ್ಟ ಶಾಸಕರ, ಅಧಿಕಾರಿಗಳ ಸಭೆ ನಡೆಸಲಾಯಿತು. ಕಂದಾಯ, ಅರಣ್ಯ ಹಾಗೂ ಗೃಹಸಚಿವರು ಭಾಗವಹಿಸಿದ್ದರು. ಎತ್ತಿನಹೊಳೆ ವಿಚಾರವಾಗಿ ಕೇಂದ್ರ ಸರ್ಕಾರದ ಸಂಬಂಧಪಟ್ಟ ಸಚಿವರನ್ನು ಭೇಟಿಯಾಗಿದ್ದೆ. ನಾವು ಅವರ ಷರತ್ತುಗಳನ್ನು ಒಪ್ಪಿಕೊಂಡು ಮುಂದುವರೆದಿದ್ದೇವೆ” ಎಂದರು.
5300 ಎಕರೆ ಬದಲಿಯಾಗಿ ಅರಣ್ಯ ಇಲಾಖೆಗೆ
“ಮೇಕೆದಾಟು ವಿಚಾರವಾಗಿ ಡಿಪಿಆರ್ ಸಿದ್ಧವಾಗಿದ್ದು ಅದನ್ನು ಸಹ ಸಮಿತಿ ಮುಂದೆ ಸಲ್ಲಿಕೆ ಮಾಡಲಾಗುವುದು. ಮತ್ತೊಮ್ಮೆ ವೆಚ್ಚ ಪರಿಷ್ಕರಣೆ ಮಾಡಿದ್ದೇವೆ. ಸುಮಾರು 5,300 ಎಕರೆ ಜಮೀನನ್ನು ನಾವು ಅರಣ್ಯ ಇಲಾಖೆಗೆ ನೀಡಬೇಕಿದೆ. ಇದರ ಬಗ್ಗೆಯೂ ಕಂದಾಯ ಇಲಾಖೆ ಜೊತೆ ಮಾತನಾಡಲಾಗುವುದು” ಎಂದರು.
ಬೆಂಗಳೂರು ನಗರ ಪ್ರದಕ್ಷಿಣೆ ಬಗ್ಗೆ ಕೇಳಿದಾಗ, “ಈಗಾಗಲೇ ಶಿಥಿಲ ಮರಗಳು, ಹಾಗೂ ಕೊಂಬೆಗಳ ತೆರವಿಗೆ ಸೂಚಿಸಲಾಗಿದೆ. ನೀರು ಹರಿವಿಗೆ ತಡೆಗಳನ್ನು ತೆರವುಗೊಳಿಸಲಾಗುವುದು. ಮೊದಲು ಮಳೆ ಬರಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ನಾಳೆ ಮೂರು ಗಂಟೆಗೆ ಬೆಂಗಳೂರು ನಗರ ಸಂಚಾರ ಮಾಡಲಿದ್ದೇನೆ. ಒಂದೆರಡು ಮೇಲ್ಸೆತುವೆಗಳ ಲೋಕಾರ್ಪಣೆಗೂ ಪೂಜೆ ನೆರವೇರಿಸಲಾಗುವುದು” ಎಂದರು.
ಮಳೆ ಹಾನಿ ತಡೆಯಲು ಸಿದ್ದತೆ: ಮಳೆ ಚೆನ್ನಾಗಿ ಬರಲಿ ಎಂದು ಪ್ರಾರ್ಥನೆ
ಬೆಂಗಳೂರು: “ಇಡೀ ಬೆಂಗಳೂರಿನಾದ್ಯಂತ ಅಪಾಯಕಾರಿಯಾಗಿರುವ ಕಾಂಪೌಂಡ್ ಗಳ ಪಕ್ಕ ಇರುವ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿ ಎಂದು ಸೂಚನೆ ನೀಡಲಾಗಿದೆ. ಇಂತಹ ಪ್ರದೇಶಗಳನ್ನು ಗುರುತಿಸಿ ಎಂದು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಗುರುವಾರದಂದು ಪ್ರತಿಕ್ರಿಯೆ ನೀಡಿದರು.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆಯೇ ಎಂದು ಕೇಳಿದಾಗ, “ಈ ದುರ್ಘಟನೆ ಸಂಭವಿಸಬಾರದಿತ್ತು, ಆದರೂ ಸಂಭವಿಸಿದೆ ಯಾವ ಅಧಿಕಾರಿಗಳ ನಿರ್ಲಕ್ಷ್ಯ ಎಂದು ನಾನು ಹೇಳುವುದಿಲ್ಲ. ವಾಜಪೇಯಿ (ಬೌರಿಂಗ್) ಆಸ್ಪತ್ರೆಯ ಕಾಂಪೌಂಡ್ ಪಕ್ಕದಲ್ಲಿ ಮಣ್ಣಿನ ರಾಶಿ ಹಾಕಿದ್ದಾರೆ. ಇದರ ಒತ್ತಡ ತಾಳಲಾರದೆ ಕಾಂಪೌಂಡ್ ಕುಸಿದಿದೆ. ಈ ರಸ್ತೆಯಲ್ಲಿಯೂ ಯಾವ ವ್ಯಾಪಾರಿಗಳನ್ನು ಕೂರಿಸಬಾರದು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ.” ಎಂದರು.
“ಬೆಂಗಳೂರಿನ ಎಲ್ಲಾ ರಸ್ತೆಗಳಲ್ಲಿ ಇರುವ ದುರ್ಬಲ ಮರಗಳು, ಕೊಂಬೆಗಳನ್ನು ಕತ್ತರಿಸಲಾಗುವುದು. ಈಗಾಗಲೇ ಕೆಲಸ ಪ್ರಾರಂಭವಾಗಿದೆ. ಇದರ ಬಗ್ಗೆ ಪೊಲೀಸ್ ಹಾಗೂ ಬಿಬಿಎ ಅಧಿಕಾರಿಗಳು ಕೆಲಸ ಮಾಡಿ ಪಟ್ಟಿ ತಯಾರಿಸಿದ್ದಾರೆ. ಮಳೆಹಾನಿ ತಡೆಗೆ ಕಂಟ್ರೋಲ್ ರೂಮ್ ಸಹ ಅಣಿಯಾಗಿದೆ. ಅಧಿಕಾರಿಗಳು ಸಹ ಕಾರ್ಯಪ್ರವೃತ್ತರಾಗಿದ್ದಾರೆ” ಎಂದು ತಿಳಿಸಿದರು.
ಮಳೆ ಚೆನ್ನಾಗಿ ಬರಲಿ ಎಂದು ಪ್ರಾರ್ಥನೆ
ಹವಾಮಾನ ಇಲಾಖೆಯವರು ಈ ವರ್ಷ ಮಳೆ ಕಡಿಮೆ ಬರುತ್ತದೆ ಎಂದು ಹೇಳಿದ್ದಾರೆ. ಇದರಿಂದ ಆಣೆಕಟ್ಟುಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಲಿದೆ. ನಂತರ ವಿದ್ಯುತ್ ಉತ್ಪಾದನೆ ಕುಸಿಯಲಿದೆ. ನಾನು ನಾಡಿದ್ದು ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡುತ್ತಿದ್ದೇನೆ. ಅಲ್ಲಿ ಎಲ್ಲಾ ಗೇಟ್ ಬದಲಿ ಕಾರ್ಯ ಮುಕ್ತಾಯವಾಗಿದ್ದು, ನೀರಿನ ಶೇಖರಣೆ ಆರಂಭಿಸಬೇಕಿದೆ. ಇನ್ನು ಕಾವೇರಿ ನೀರಿನ ವಿಚಾರದಲ್ಲಿ 177 ಟಿಎಂಸಿ ನೀರು ಹರಿಸಲೇಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಕಾರಣಕ್ಕೆ ಮಳೆ ಚೆನ್ನಾಗಿ ಬರಲಿ ಎಂದು ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಹೆಚ್ಚಿನ ಮಳೆ ಬಂದರೆ ಅದನ್ನು ಎದುರಿಸಲು ಈಗಾಗಲೇ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ” ಎಂದು ಹೇಳಿದರು.
ಆದಷ್ಟು ಬೇಗ ಅಧಿಕಾರ ಹಂಚಿಕೆ ಗೊಂದಲ ಬಗೆಹರಿಸುವಿರಾ, ಮಲ್ಲಿಕಾರ್ಜುನ ಖರ್ಗೆ ಅವರು ಬದಲಾವಣೆ ಇಲ್ಲ ಎಂದಿದ್ದಾರೆ ಎಂದು ಕೇಳಿದಾಗ, “ಗೊಂದಲವೇ ಇಲ್ಲ. ನೀವುಗಳು ಏನಿದ್ದರೂ ಮಲ್ಲಿಕಾರ್ಜುನ ಖರ್ಗೆ ಸಾಹೇಬರನ್ನು ಕೇಳಿ. ನಾಯಕತ್ವ ಬದಲಾವಣೆ ವಿಚಾರದಲ್ಲಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಇದು ಪಕ್ಷ ಹೈಕಮಾಂಡ್ ಗೆ ಬಿಟ್ಟ ವಿಚಾರ ಅವರು ತೀರ್ಮಾನ ಮಾಡುತ್ತಾರೆ” ಎಂದರು.
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: “ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಬೇಸರ ವ್ಯಕ್ತಪಡಿಸಿದರು.
ಕಾಪೌಂಡ್ ಗೋಡೆ ಕುಸಿದು ಏಳು ಮಂದಿ ಮೃತಪಟ್ಟ ಹಾಗೂ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಬೌರಿಂಗ್ ಆಸ್ಪತ್ರೆಗೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಬುಧವಾರ ರಾತ್ರಿ ಭೇಟಿ ನೀಡಿ ಮಾಹಿತಿ ಪಡೆದರು. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
“ಏಳು ಜನ ಮೃತಪಟ್ಟಿದ್ದು, ಅದರಲ್ಲಿ 4 ಜನ ಬೀದಿ ಬದಿ ವ್ಯಾಪಾರಿಗಳು, ಇಬ್ಬರು ಕೇರಳದವರು. ಒಂದು ಮಗು ಸಾವನ್ನಪ್ಪಿದ್ದು, ಒಬ್ಬರ ಗುರುತು ಇನ್ನೂ ಸಿಕ್ಕಿಲ್ಲ. ಚಪ್ಪಲಿ ವ್ಯಾಪಾರಿ, ಬಟ್ಟೆ ವ್ಯಾಪಾರಿ ಮೃತಪಟ್ಟಿದ್ದಾರೆ. ಪ್ರವಾಸಕ್ಕೆ ಕೇರಳದಿಂದ ಬಂದವರು ಮೃತಪಟ್ಟಿದ್ದಾರೆ” ಎಂದರು.
“ಮರಗಳು, ಕೊಂಬೆಗಳು ಬಿದ್ದು ವಾಹನಗಳಿಗೂ ಹಾನಿಯಾಗಿದೆ. ನಾಳೆಯಿಂದಲೇ ದುರ್ಬಲ ಕೊಂಬೆಗಳನ್ನು ತೆರವುಗೊಳಿಸಲು ನಾನು ನಿರ್ದೇಶನ ನೀಡಿರುವೆ. ನಗರದಲ್ಲಿ ನೂರಕ್ಕೂ ಹೆಚ್ಚು ಕಡೆ ಮರ ಬಿದ್ದಿದ್ದು, ಅಪಾಯಕಾರಿಯಾಗಿರುವ ಮರ ಹಾಗೂ ಕೊಂಬೆಗಳನ್ನು ಗುರುತಿಸಿ, ತೆರವುಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿರುವೆ. ನಾನು ಕನಕಪುರದಿಂದ ಮರಳುವಾಗಲೂ ಅನೇಕ ಕಡೆಗಳಲ್ಲಿ ಮರ ಬಿದ್ದಿರುವುದನ್ನು ಗಮನಿಸಿದೆ” ಎಂದರು.
“ಮುಖ್ಯಮಂತ್ರಿಗಳು ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದಾರೆ. ಇಲ್ಲಿ ಪರಿಹಾರಕ್ಕಿಂತ ಈ ಅಪಘಾತ ಸಂಭವಿಸಬಾರದಿತ್ತು. ಕೇರಳದ ಕುಟುಂಬಶ್ರೀ ಎನ್ನುವ ಸಂಸ್ಥೆಯ ಮುಖಾಂತರ 56 ಮಂದಿ ಪ್ರವಾಸಕ್ಕೆ ಬಂದಿದ್ದಾರೆ. ಕಮರ್ಷಿಯಲ್ ಸ್ಟ್ರೀಟ್ ಅಲ್ಲಿ ಶಾಪಿಂಗ್ ಗೆ ಬಂದಿದ್ದರು. ಆಗ ಮಳೆ ಬಂದಿದೆ. ಎಲ್ಲರಿಗೂ ಎಚ್ಚರಿಕೆ ನೀಡಿದ್ದಾರೆ. ಆಗ ಅವರು ಮಳೆಯಿಂದ ರಕ್ಷಣೆ ಪಡೆಯಲು ಗೋಡೆ ಪಕ್ಕ ಹೋಗಿದ್ದಾರೆ. ಆಗ 8 ಅಡಿ ಎತ್ತರದ ಗೋಡೆ ಕುಸಿದು ಮೃತಪಟ್ಟಿದ್ದಾರೆ. ಪ್ರೀತಿ, ಶೈಜಾ, ಶಿಜು ಎನ್ನುವ ಮೂವರು ಗಾಯಗೊಂಡಿದ್ದರು, ಈಗ ಚೇತರಿಸಿಕೊಂಡಿದ್ದಾರೆ” ಎಂದರು.
“ತೀರಿಕೊಂಡವರು ಲತಾ ಮತ್ತು ಸ್ಪೃತಿ. ಇವರೆಲ್ಲಾ ನ್ಯೂಟ್ರಿಷಿಯನ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದವರು. ಸರ್ಕಾರದ ಅಧಿಕಾರಿಗಳು ಸಹ ಇವರ ಜೊತೆ ಬಂದಿದ್ದಾರೆ. ಕೇರಳ ಸರ್ಕಾರಕ್ಕೂ ನಾವು ಮಾಹಿತಿ ನೀಡುತ್ತೇವೆ. ಶವ ಪರೀಕ್ಷೆ ನಡೆಸಿ ಇಲ್ಲಿಂದಲೇ ಗೌರವಯುತವಾಗಿ ಅವರನ್ನು ಕಳಿಸಿಕೊಡುವ ವ್ಯವಸ್ಥೆ ಮಾಡಲಾಗುವುದು” ಎಂದು ಹೇಳಿದರು.
ಬಿಜೆಪಿಗರು ಏನೂ ಸಹಾಯ ಮಾಡುವುದಿಲ್ಲ
ಸರ್ಕಾರದ ವೈಫಲ್ಯ ಎನ್ನುವ ಬಿಜೆಪಿಯವರ ಟೀಕೆ ಬಗ್ಗೆ ಕೇಳಿದಾಗ, “ವಿರೋಧ ಪಕ್ಷದವರು ಹೇಳಿದ್ದನ್ನೇ ಹೇಳುತ್ತಾರೆ. ಅವರಿಗೆ ಇನ್ನೇನು ಹೇಳುವುದು. ಅವರುಗಳು ಏನೂ ಸಹಾಯ ಮಾಡುವುದಿಲ್ಲ. ಟೀಕೆ ಮಾಡಬೇಕು, ದೂರಬೇಕು. ಮಾಧ್ಯಮಗಳ ಮುಂದೆ ಏನೋ ಒಂದು ಮಾತನಾಡಬೇಕು. ನಾವು ಏನಾದರೂ ಪರಿಹಾರ ಕಂಡು ಹಿಡಿಯಬೇಕು ಎಂದು ನಾವು ಆಲೋಚಿಸುತ್ತಿದ್ದೇವೆ” ಎಂದರು.
“ನಾನು ಕನಕಪುರದಲ್ಲಿ ಕೆಡಿಪಿ ಸಭೆ ಮಾಡುತ್ತಿದ್ದಾಗ, ಈ ದುರ್ಘಟನೆ ಬಗ್ಗೆ ಪೊಲೀಸ್ ಆಯುಕ್ತರು ಜಿಬಿಎ ಆಯುಕ್ತರು ನನಗೆ ಕರೆ ಮಾಡಿ ತಿಳಿಸಿದರು. ಈ ಸ್ಥಳಕ್ಕೆ ಸಿಎಂ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಇದು ಅತ್ಯಂತ ಹಳೆಯ ಗೋಡೆಯಾಗಿದ್ದು, ಈ ಘಟನೆ ನಡೆದಿರುವುದು ದುರ್ದೈವ. ಈ ದುರಂತ ಬಹಳ ನೋವು ತಂದಿದೆ. ಈ ಬಗ್ಗೆ ತನಿಖೆ ಮಾಡಿ ವರದಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ವರದಿಗಳ ಪ್ರಕಾರ ಬೆಂಗಳೂರು ಮಳೆಗೆ 8 ಸಾವು ಸಂಭವಿಸಿದೆ. ವೆಗಾ ಸಿಟಿ ಮಾಲ್ ಬಳಿ ಒಂದು ಸಾವು ಸಂಭವಿಸಿದೆ” ಎಂದರು.
“ಇಂತಹ ಅಪಾಯಕಾರಿ ಜಾಗಗಳಲ್ಲಿ ಬೀದಿ ವ್ಯಾಪಾರಿಗಳು ವ್ಯಾಪಾರ ಮಾಡದಂತೆ ಕ್ರಮ ವಹಿಸಲು ಜಿಬಿಎ ಆಯುಕ್ತರಿಗೆ ಸೂಚಿಸಿರುವೆ. ಈ ಬಾರಿ ಮಳೆ ಬರುವುದಿಲ್ಲ ಎಂಬ ಆತಂಕ ಇತ್ತು, ಮಳೆ ಬರಬೇಕು. ಬೆಂಗಳೂರಿನಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಆಲಿಕಲ್ಲು ಮಳೆ ಬಿದಿರಲಿಲ್ಲ. ಮುಂದೆ ಇಂತಹ ಅನಾಹುತ ಆಗದಂತೆ ಕ್ರಮ ಕೈಗೊಳ್ಳಲಾಗುವುದು” ಎಂದರು.
ಇದು ಜಿಬಿಎ ಅಧಿಕಾರಿಗಳ ವೈಫಲ್ಯವಲ್ಲವೇ ಎಂದು ಕೇಳಿದಾಗ, “ಇದು ನೂರು ವರ್ಷಗಳ ಹಳೆಯ ಆಸ್ಪತ್ರೆ. ಹೊಸ ಆಸ್ಪತ್ರೆಯಲ್ಲ. ಈ ಭಾಗವನ್ನು ಸರಿಯಾದ ರೀತಿ ನಿರ್ವಹಣೆ ಮಾಡಿಲ್ಲ. ಹೀಗಾಗಿ ಈ ದುರ್ಘಟನೆ ಸಂಭವಿಸಿದೆ. ಇದು ಜಿಬಿಎಗೆ ಸಂಬಂಧಿಸಿಲ್ಲ” ಎಂದು ತಿಳಿಸಿದರು.
ಆರೋಪ ಮಾಡುವ ಸಮಯವಲ್ಲ
ಅಧಿಕಾರಿಗಳ ವಿರುದ್ಧ ಗರಂ ಆಗಿದ್ದೀರಿ ಎಂದು ಕೇಳಿದಾಗ, “ಇಂತಹ ಪರಿಸ್ಥಿತಿಯಲ್ಲಿ ಯಾರಾದರೂ ಹೊಣೆಗಾರಿಕೆ ಹೊತ್ತುಕೊಳ್ಳಬೇಕು. ಈಗ ಅರೋಪ ಮಾಡುವ ಸಮಯವಲ್ಲ. ಪರಿಹಾರ ಕಂಡುಕೊಳ್ಳುವುದು ಮುಖ್ಯ” ಎಂದು ತಿಳಿಸಿದರು.

