ದೊಡ್ಡಬಳ್ಳಾಪುರ: ನಗರದಲ್ಲಿ ಇಂದು ಸಂಜೆ ಗಾಳಿ ಮಿಶ್ರಿತ ಮಳೆ ಅಬ್ಬರಿಸಿದ್ದು (Heavy rain), ಸುಮಾರು 30 ನಿಮಿಷಗಳ ಕಾಲ ನಗರ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗಿದೆ.
ನಿನ್ನೆ ರಾತ್ರಿ 1.30 ರ ಬಳಿಕ ತೂಬಗೆರೆ, ಸಾಸಲು ಹೋಬಳಿಯ ಹಲವೆಡೆ ಅಬ್ಬರಿಸಿದ್ದ ಮಳೆ, ಇಂದು ಸಂಜೆ ದೊಡ್ಡಬಳ್ಳಾಪುರದಲ್ಲಿ ಮಳೆ ಹಿನ್ನೆಲೆ ಭಾರೀ ಅವಾಂತರ ಉಂಟಾಗಿದ್ದು, ಹಲವೆಡೆ ಟ್ರಾಫಿಕ್ ಸಂಪೂರ್ಣ ಅಸ್ತವ್ಯಸ್ತಗೊಂಡ ಘಟನೆ ವರದಿಯಾಗಿದೆ.
ದೊಡ್ಡಬಳ್ಳಾಪುರದಲ್ಲಿ ಅಬ್ಬರಿಸಿದ ಮಳೆ.. ಮರ ಬಿದ್ದು ಟ್ರಾಫಿಕ್ ಜಾಮ್ pic.twitter.com/Vkx9rWpsSP
— Harithalekhani (@harithalekhani) May 1, 2026
ಶುಕ್ರವಾರ ರಾತ್ರಿ ಸುರಿದ ಗಾಳಿ ಸಹಿತ ಮಳೆಯ ಪರಿಣಾಮವಾಗಿ ರಾಜ್ಯ ಹೆದ್ದಾರಿ ರಸ್ತೆ ಬದಿಯ ದೊಡ್ಡ ಮರವೊಂದು ಉರುಳಿ ಬಿದ್ದು, ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ.
ಪ್ರವಾಸಿ ಮಂದಿರ ಹಾಗೂ ಡಿ ಕ್ರಾಸ್ ನಡುವಿನ ರಾಜ್ಯ ಹೆದ್ದಾರಿ ಚರ್ಚ್ ಬಳಿ ಮರವೊಂದು ರಸ್ತೆಗೆ ಉರುಳಿ ಬಿದ್ದಿದೆ. ಈ ವೇಳೆ ಯಾವುದೇ ವಾಹನಗಳು ಸಂಚರಿಸದ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಉಂಟಾಗಿಲ್ಲ.
ಆದರೆ ರಾಜ್ಯ ಹೆದ್ದಾರಿಯಲ್ಲಿ ಮರ ಉರುಳಿ ಬಿದ್ದಿರುವ ಕಾರಣ ಯಲಹಂಕ- ಹಿಂದೂಪುರ ನಡುವಿನ ರಸ್ತೆಯಲ್ಲಿ ವಾಹನಗಳು ನೂರಾರು ಮೀಟರ್‌ಗಳಷ್ಟು ಸಾಲಾಗಿ ನಿಂತಿವೆ. ಸ್ಥಳೀಯರು ಮತ್ತು ಪ್ರಯಾಣಿಕರು ಗಂಟೆಗಳ ಕಾಲ ಸಿಲುಕಿಕೊಂಡು ಪರದಾಡುವಂತಾಗಿದೆ. ಪೊಲೀಸರು ವಾಹನ ದಟ್ಟಣೆ ನಿಯಂತ್ರಿಸಲು ಶ್ರಮಿಸುತ್ತಿದ್ದಾರೆ.
ಕೆಲ ವಾಹನ ಚಾಲಕರು ಪರ್ಯಾಯ ಮಾರ್ಗಗಳನ್ನು ಬಳಸಲು ಪ್ರಯತ್ನಿಸಿದರಾದರೂ, ಅಲ್ಲಿ ಕೂಡ ಸಂಚಾರ ದಟ್ಟಣೆ ಹೆಚ್ಚಾಗಿದೆ.
ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಸುರಿದ ಭಾರೀ ಮಳೆಯಿಂದ ಅನೇಕ ಮರಗಳು ಉರುಳಿ ಬಿದ್ದಿದ್ದು, 170ಕ್ಕೂ ಹೆಚ್ಚು ಮರಗಳು ಬೇರುಸಹಿತ ಉರುಳಿವೆ ಎಂಬ ವರದಿಯೂ ಇದೆ. ಇದರಿಂದ ರಸ್ತೆ ತಡೆ, ವಿದ್ಯುತ್ ವ್ಯತ್ಯಯ ಹಾಗೂ ವಾಹನಗಳಿಗೆ ಹಾನಿ ಉಂಟಾಗಿರುವುದು ಗಮನಾರ್ಹ.
ಇದೇ ರೀತಿಯ ಪರಿಣಾಮಗಳು ದೊಡ್ಡಬಳ್ಳಾಪುರ ನಗರದಲ್ಲೂ ಕಂಡುಬಂದಿದೆ. ಸ್ಥಳೀಯ ನಿವಾಸಿಗಳು ನಗರದಲ್ಲಿ ಮರಗಳ ನಿರ್ವಹಣೆ ಸರಿಯಾಗಿ ನಡೆಯಬೇಕು ಎಂದು ಆಗ್ರಹಿಸಿದ್ದಾರೆ. ಹಳೆಯ ಹಾಗೂ ಅಪಾಯಕಾರಿಯಾದ ಮರಗಳನ್ನು ಮುಂಚಿತವಾಗಿ ಗುರುತಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ಮಳೆಗಾಲದಲ್ಲಿ ಇಂತಹ ಘಟನೆಗಳು ಮರುಕಳಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.
ಒಟ್ಟಿನಲ್ಲಿ, ಬಿಸಿಲ ಬೇಗೆಯಿಂದ ಬಸವಳಿಯುತ್ತಿದ್ದ ಜನರಿಗೆ ಮಳೆ ತಂಪು ನೀಡಿದರೂ, ರಾಜ್ಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಿಸುವ ಸಂಸ್ಥೆಯ ಮೂಲಸೌಕರ್ಯಗಳ ಕೊರತೆ ಮತ್ತು ನಿರ್ವಹಣಾ ಸಮಸ್ಯೆಗಳ ಕಾರಣದಿಂದ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸಾರ್ವಜನಿಕರು ಪದೇ ಪದೇ ಸಮಸ್ಯೆ, ವಾಹನ ಸವಾರರು ಸಂಕಷ್ಟ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

