ಬೆಂಗಳೂರು: ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರ ಹಿರಿಯ ಪುತ್ರಿ ಐಶ್ವರ್ಯಾ ಮತ್ತು ಅಳಿಯ ಅಮರ್ತ್ಯ ಹೆಗ್ಡೆ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಡಿ.ಕೆ.ಶಿವಕುಮಾರ್ ಕುಟುಂಬದಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ. ಮೊಮ್ಮಗಳನ್ನು ಕಂಡು ಡಿಕೆಶಿ ಸಂತಸ ವ್ಯಕ್ತಪಡಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಅವರ ಹಿರಿಯ ಪುತ್ರಿ ಐಶ್ವರ್ಯಾ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಮೊಮ್ಮಗಳನ್ನು ಮುದ್ದಾಡಿದ ಡಿ.ಕೆ.ಶಿವಕುಮಾರ್
ಮಗಳು ಹೆಣ್ಣು ಮಗುವಿಗೆ ಜನ್ಮ ನೀಡಿದ ಸುದ್ದಿ ತಿಳಿಯುತ್ತಿದ್ದಂತೆಯೇ ಡಿ.ಕೆ. ಶಿವಕುಮಾರ್ ಅವರು ತಮ್ಮ ಬಿಡುವಿಲ್ಲದ ರಾಜಕೀಯ ಕೆಲಸಗಳ ನಡುವೆಯೂ ಆಸ್ಪತ್ರೆಗೆ ಓಡೋಡಿ ಬಂದಿದ್ದಾರೆ. ಆಸ್ಪತ್ರೆಯಲ್ಲಿ ಮೊಮ್ಮಗಳನ್ನು ಮೊದಲ ಬಾರಿಗೆ ಕೈಯಲ್ಲಿ ಎತ್ತಿಕೊಂಡ ಶಿವಕುಮಾರ್ ಅವರ ಮುಖದಲ್ಲಿ ಮಂದಹಾಸ ಅರಳಿತ್ತು.
ಸದಾ ಗಂಭೀರವಾಗಿ ಕಾಣುತ್ತಿದ್ದ ಡಿಕೆಶಿ, ಮೊಮ್ಮಗಳನ್ನು ಎತ್ತಿಕೊಂಡಾಗ ಒಬ್ಬ ಸಾಮಾನ್ಯ ತಾತನಂತೆ ಭಾವುಕರಾಗಿ ಸಂಭ್ರಮಿಸಿದರು. ಆಸ್ಪತ್ರೆಯಲ್ಲಿ ಮಗುವನ್ನು ಎತ್ತಿಕೊಂಡಿರುವ ಅವರ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ.
ಡಿ.ಕೆ. ಶಿವಕುಮಾರ್ ಬದ್ದತೆಗೆ ತೇಜಸ್ವಿ ಸೂರ್ಯ ಪ್ರಶಂಸೆ
ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಹಿರಿಯ ಪುತ್ರಿ ಐಶ್ವರ್ಯಾ ಅವರು ಡೆಲಿವರಿಗೆಂದು ಆಸ್ಪತ್ರೆಗೆ ದಾಖಲಾಗಿದ್ದರು, ಪೂರ್ವ ನಿಯೋಜಿತ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಡಿಸಿಎಂ ಬದ್ದತೆ ಪ್ರದರ್ಶಿಸಿದ್ದಾರೆ.
ಈ ಕುರಿತಂತೆ ಪ್ರಶಂಸೆ ವ್ಯಕ್ತಪಡಿಸಿರುವ ಸಂಸದ ತೇಜಸ್ವಿ ಸೂರ್ಯ ಅವರು, ಇವತ್ತು DCM ಡಿ ಕೆ ಶಿವಕುಮಾರ್ ಅವರ ಜೊತೆ ಬೆಂಗಳೂರು ದಕ್ಷಿಣದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದೆ.
ಕಾರ್ಯಕ್ರಮಗಳ ಮಧ್ಯೆ ಕಾರಿನಲ್ಲಿ ಜೊತೆಗೆ ಪ್ರಯಾಣಿಸುವಾಗ ಅವರಿಗೆ ಮನೆಯಿಂದ ಪದೇ ಪದೇ ಫೋನ್ ಬರುತ್ತಿತ್ತು. ವಿಚಾರಿಸಿದಾಗ, “ಇವತ್ತು ನನ್ನ ಮಗಳ ಡೆಲಿವರಿ. ನಾನು ತಾತ ಆಗುತ್ತಿದ್ದೇನೆ” ಎಂದರು.
ಒಂದು ಕಡೆ ಕುಟುಂಬದ ಅತ್ಯಂತ ಸಂತೋಷದ ಕ್ಷಣ. ಇನ್ನೊಂದು ಕಡೆ ಸಾರ್ವಜನಿಕ ಜವಾಬ್ದಾರಿ. ಆದರೂ ಅವರು ಫ್ಲೈಓವರ್ ಉದ್ಘಾಟನೆ, ಸ್ಕೈವಾಕ್ ಶಂಕುಸ್ಥಾಪನೆ ಸೇರಿದಂತೆ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗಿಯಾದರು.
The first casualty of public life is personal life ಅಂತ ಮಾತಿದೆ.
ಇಂತಹ ಸಂದರ್ಭಗಳಲ್ಲಿ ಆ ಮಾತಿನ ಅರ್ಥ ಇನ್ನಷ್ಟು ಸ್ಪಷ್ಟವಾಗುತ್ತದೆ.
ಇವತ್ತು DCM ಡಿ ಕೆ ಶಿವಕುಮಾರ್ ಅವರ ಜೊತೆ ಬೆಂಗಳೂರು ದಕ್ಷಿಣದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದೆ.
— Tejasvi Surya (@Tejasvi_Surya) May 1, 2026
ಕಾರ್ಯಕ್ರಮಗಳ ಮಧ್ಯೆ ಕಾರಿನಲ್ಲಿ ಜೊತೆಗೆ ಪ್ರಯಾಣಿಸುವಾಗ ಅವರಿಗೆ ಮನೆಯಿಂದ ಪದೇ ಪದೇ ಫೋನ್ ಬರುತ್ತಿತ್ತು. ವಿಚಾರಿಸಿದಾಗ, “ಇವತ್ತು ನನ್ನ ಮಗಳ ಡೆಲಿವರಿ. ನಾನು ತಾತ ಆಗುತ್ತಿದ್ದೇನೆ” ಎಂದರು
ಒಂದು ಕಡೆ ಕುಟುಂಬದ ಅತ್ಯಂತ ಸಂತೋಷದ… pic.twitter.com/XQoLKmZVG8
ತಾತನಾದ ಡಿ ಕೆ ಶಿವಕುಮಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರ ಮಗಳು ಐಶ್ವರ್ಯ ಅವರಿಗೆ, ಮಗುಗೆ ಮತ್ತು ಕುಟುಂಬಕ್ಕೆ ಭಗವಂತ ಆಯುಷ್ಯ, ಆರೋಗ್ಯ ಮತ್ತು ಸಂತೋಷ ಕರುಣಿಸಲಿ ಎಂದು ತೇಜಸ್ವಿ ಸೂರ್ಯ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

