ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡತುಮಕೂರು ಹಾಗೂ ದೊಂಬರಹಳ್ಳಿ ಗ್ರಾಮದ ಸರ್ಕಾರಿ ಗೋಮಾಳವನ್ನು, ಸರ್ಕಾರದ ಆದೇಶದನ್ವಯ ಹರಾಜು ಹಾಕಲು ಮುಂದಾಗಿದ್ದು.ಈ ಪ್ರಕ್ರಿಯೆಯನ್ನು ನಿಲ್ಲಿಸುವಂತೆ ದೊಡ್ಡತುಮಕೂರು ಹಾಲಿನ ಡೈರಿ ಮುಂದೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಮುಖಂಡರು, ಮಧುರೆ ಹೋಬಳಿ, ದೊಡ್ಡತುಮಕೂರು ಗ್ರಾಮದ ಸರ್ವೇ ನಂ.80 ರಲ್ಲಿ 12 ಎಕರೆ ಮತ್ತು ದೊಂಬರಹಳ್ಳಿ ಗ್ರಾಮದ ಸರ್ಕಾರಿ ಗೋಮಾಳ ಸರ್ವೆ ನಂ 49ರಲ್ಲಿ 5 ಎಕರೆ 15 ಗುಂಟೆ ಸರ್ಕಾರಿ ಗೋಮಾಳವನ್ನು ಸರ್ಕಾರದಿಂದ ಹರಾಜ ಹಾಕಲು ಮುಂದಾಗಿರುವುದು ಖಂಡನೀಯ.
ದೊಡ್ಡತುಮಕೂರು ಹಾಗೂ ದೊಂಬರಹಳ್ಳಿ ಗ್ರಾಮದಲ್ಲಿ ಸುಮಾರು 700ಕ್ಕೂ ಹೆಚ್ಚು ಕುಟುಂಬಗಳು ವ್ಯವಸಾಯ ಮೂಲ ಕಸುಬನ್ನಾಗಿಸಿಕೊಂಡು ಹಾಗೂ ಅಧಿಕ ಸಂಖ್ಯೆಯಲ್ಲಿ ಹೈನುಗಾರಿಕೆಯನ್ನು ನಡೆಸಿಕೊಂಡು ಜೀವನ ಸಾಗಿಸುತ್ತಿದ್ದಾರೆ.ಅಲ್ಲದೆ ಈ ಗ್ರಾಮಗಳಲ್ಲಿ 1000ಕ್ಕೂ ಹೆಚ್ಚು ಜಾನುವಾರುಗಳಿದ್ದು,ಇವುಗಳಿಗೆ ಈ ಗೋಮಾಳದಿಂದಲೇ ಮೇವು,ಆಹಾರ ದೊರೆಯುತ್ತಿರುತ್ತದೆ. ಸರ್ಕಾರ ಈ ಜಮೀನುಗಳ ಹರಾಜು ಹಾಕಿದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ಸುಮಾರು 2500ಕ್ಕೂ ಹೆಚ್ಚು ಜನಸಂಖ್ಯೆ ಇರುವ ಈ ಗ್ರಾಮಕ್ಕೆ ಜನವಸತಿಗೆ ಯೋಗ್ಯವಾದ ಭೂಮಿಯೂ ಆಗಿರುವುದರಿಂದ.ಗ್ರಾಮಪಂಚಾಯಿತಿಯಿಂದ ಕಡು ಬಡವರಿಗೆ,ನಿವೇಶನ ರಹಿತರಿಗೆ ಹಾಗೂ ಪ್ರತಿ ಕುಟುಂಬಕ್ಕೆ ಒಂದು ನಿವೇಶನ ಹಂಚಿಕೆ ಮಾಡಲು ಫಲಾನುಭವಿಗಳಿಂದ ಅರ್ಜಿಯನ್ನು ಸ್ವೀಕರಿಸಿ ಗ್ರಾಮಸಭೆಯಲ್ಲಿ ಅನುಮೋದನೆಗೊಂಡು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಹ ಸಲ್ಲಿಕೆಯಾಗಿರುವುದರಿಂದ ಈ ಹರಾಜು ಪ್ರಕ್ರಿಯೆಯನ್ನು ಕೈಬಿಡಬೇಕು ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದೆಂದರು.
ಪ್ರತಿಭಟನೆಯಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ವೆಂಕಟೇಶ್, ಮುಖಂಡರಾದ ವಸಂತ್ ಕುಮಾರ್, ಶಿವಕುಮಾರ್, ರಾಮಕೃಷ್ಣಪ್ಪ, ಅಜಯ್, ವೆಂಕಟೇಶ್, ಶ್ರೀರಾಮ್, ನಂಜಪ್ಪ, ಚಂದ್ರನ, ಅಂಜಿನಪ್ಪ, ರಾಘು,ಲೋಕೇಶ್, ಟಿ.ಎಲ್.ವಸಂತ್ ಮತ್ತಿತರಿದ್ದರು.

