ದೊಡ್ಡಬಳ್ಳಾಪುರ: ಕರೊನಾ ಸೋಂಕಿನಿಂದ ಗುಣಮುಖರಾಗಿ ಬಂದವರಿಂದ ತಾಲೂಕಿನಲ್ಲಿ ಯಾವ ರೀತಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಪಡೆದು ನಂತರ ರಾಜಕೀಯ ಸ್ವಾರ್ಥಕ್ಕೆ ಆರೋಪ ಮಾಡಬೇಕೆಂದು ಶಾಸಕ ಟಿ.ವೆಂಕಟರಮಣಯ್ಯ ಜೆಡಿಎಸ್ ಮುಖಂಡರಿಗೆ ಕುಟುಕಿದ್ದಾರೆ.
ಕರೊನಾ ಸೋಂಕಿನ ನಿರ್ವಹಣೆ ಕುರಿತು ಶನಿವಾರ ಜೆಡಿಎಸ್ ಮುಖಂಡರ ಪತ್ರಿಕಾಗೋಷ್ಠಿಯಲ್ಲಿನ ಆರೋಪಕ್ಕೆ ತೀಕ್ಷ್ಣವಾಗಿ ಉತ್ತರ ನೀಡಿರುವ ಅವರು. ಕರೊನಾ ಸೋಂಕು ನಿರ್ವಹಣೆಗೆ ತಾಲೂಕು ಆಡಳಿತ ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿದೆ. ಪ್ರಸ್ತುತ ತಾಲೂಕಿನ 1337 ಮಂದಿ ಕರೊನಾ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ರಾಜಕೀಯ ಸ್ವಾರ್ಥಕ್ಕೆ ಜೆಡಿಎಸ್ ಮುಖಂಡರು ಕರೊನಾ ನಿರ್ವಹಣೆಯಲ್ಲಿ ತಾಲೂಕು ಆಡಳಿತ ವಿಫಲ, ಶಾಸಕ ಟಿ.ವೆಂಕಟರಮಣಯ್ಯ ಕಾಣೆಯಾಗಿದ್ದಾರೆ ಎಂದು ಆರೋಪ ಮಾಡುವ ಮುನ್ನ ಗುಣಮುಖರಾಗಿ ಮನೆಗೆ ಮರಳಿದವರ ಕೇಳಿದರೆ ಉತ್ತರ ಸಿಗುತ್ತದೆ ಎಂದು ಟಾಂಗ್ ನೀಡಿದರು.
ನಗರದ ಸಾರ್ವಜನಿಕ ಆಸ್ಪತ್ರೆ, ಬಚ್ಚಹಳ್ಳಿ ಹಾಗೂ ಇಸ್ತೂರಿನ ವಸತಿ ಶಾಲೆಗಳನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿ ಸೊಂಕಿಗೆ ಒಳಗಾಗುವ ತಾಲೂಕಿನ ಜನತೆಗೆ ಉತ್ತಮವಾದ ಸೌಲಭ್ಯಯುತ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ, ಮುಂಜಾಗ್ರತಾ ಕ್ರಮವಾಗಿ ನಗರದ ಹೊರವಲಯದ ಸ್ಕೌಟ್ ಕ್ಯಾಂಪ್ ನಲ್ಲಿ 100 ಹಾಸಿಗೆಗಳನ್ನು ಸಿದ್ದವಾಗಿಡಲಾಗಿದೆ.
ಇದಲ್ಲದೆ ಕರೊನಾ ಸೋಂಕಿತರ ಅಂಕಿ ಸಂಖ್ಯೆಯ ಪಾರದರ್ಶಕವಾಗಿಡಲು ರಾಜ್ಯ ಸರ್ಕಾರಕ್ಕೆ ಸಡ್ಡು ಒಡೆದು. ತಾಲೂಕಿನ ಪ್ರತ್ಯೇಕ ಕೋವಿಡ್-19 ಬುಲೆಟಿನ್ ನೀಡಲಾಗುತ್ತಿದೆ. ಇದು ಹೇಳಬಾರದು ಆದಾಗ್ಯೂ ಮಂಚದ ಕೊರತೆ ಉಂಟಾದ ಮಾಹಿತಿ ಬಂದ ಕೂಡಲೇ ವಯಕ್ತಿಕವಾಗಿ ಶ್ರಮವಹಿಸಿ ಖಾಸಗಿ ಕಾರ್ಖಾನೆಯಿಂದ ನಿರ್ಮಿಸಲಾಗುವ ರಟ್ಟಿನ ಮಂಚಗಳನ್ನು ತಂದು ನೀಡಲಾಗಿದೆ ಎಂದರು.
ಕರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲ
ಕರೊನಾ ನಿರ್ವಹಣೆ ನಿಜಕ್ಕೂ ವಿಫಲವಾಗಿರುವುದು ರಾಜ್ಯ ಸರ್ಕಾರವೇ ಹೊರತು, ದೊಡ್ಡಬಳ್ಳಾಪುರ ತಾಲೂಕು ಆಡಳಿತವಲ್ಲ ಎಂದು ಕಿಡಿಕಾರಿದ ಶಾಸಕ ಟಿ.ವೆಂಕಟರಮಣಯ್ಯ ಸರ್ಕಾರ ಕರೊನಾ ನಿರ್ವಹಣೆಗೆ ಸೂಕ್ತ ಸೌಲಭ್ಯ ನೀಡದೆ ಇರುವುದು ಹೆಚ್ಚುವರಿ ವೈದ್ಯರು, ಸಿಬ್ಬಂದಿಗಳನ್ನು ನೇಮಿಸದೆ ಸಂಕಷ್ಟಕ್ಕೆ ದೂಡಿದೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲೆಯ ನೆನಪೆ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರದ ವೈಪಲ್ಯದ ನಡುವೆಯೂ ದೊಡ್ಡಬಳ್ಳಾಪುರ ತಹಶಿಲ್ದಾರ್, ಆರೋಗ್ಯ ಅಧಿಕಾರಿ, ನಗರಸಭೆ, ತಾಲೂಕು ಪಂಚಾಯಿತಿ ಸೇರಿದಂತೆ ವಿವಿಧ ಇಲಾಖೆಗಳ ಸಮನ್ವಯ ಸಾಧಿಸಿ ನಿರಂತರವಾಗಿ ಸಭೆ ನಡೆಸಿ ಕರೊನಾ ಸೋಂಕಿನ ನಿರ್ವಹಣೆಗೆ ಅವಿರತ ಶ್ರಮಿಸಲಾಗುತ್ತಿದೆ. ಆಕಾಶ್ ಆಸ್ಪತ್ರೆಯಲ್ಲಿ ಸೋಂಕಿತರ ಸಾವಿನ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ದೊಡ್ಡಬಳ್ಳಾಪುರ ತಾಲ್ಲೂಕಿನ ಸೋಂಕಿತರನ್ನು ಆಕಾಶ್ ಆಸ್ಪತ್ರೆಗೆ ಚಿಕಿತ್ಸೆಗೆ ಕಳಿಸುವುದನ್ನು ಸಹ ನಿಲ್ಲಿಸಲಾಗಿದೆ ಎಂದರು.
ಕರೊನಾ ಸೋಂಕು ಇಡೀ ಪ್ರಪಂಚವನ್ನೆ ಕಾಡುತ್ತಿರುವಂತೆ ದೊಡ್ಡಬಳ್ಳಾಪುರವನ್ನು ಕಾಡುತ್ತಿದೆ, ರಾಜಕೀಯ ಸ್ವಾರ್ಥಕ್ಕೆ ಆರೋಪ ಮಾಡಿ ಸೋಂಕಿನ ನಿರ್ವಹಣೆಗೆ ಶ್ರಮಿಸುತ್ತಿರುವ ಕರೊನಾ ವಾರಿಯರ್ಸ್ ಗಳ ಆತ್ಮ ಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನ ಮಾಡಬಾರದೆಂದು ಮನವಿ ಮಾಡಿದ್ದಾರೆ.

