ದೊಡ್ಡಬಳ್ಳಾಪುರ: ತಾಲೂಕಿನಾಧ್ಯಂತ ಶನಿವಾರದಿಂದ ಬಿಟ್ಟು ಬಿಟ್ಟು ಸುರಿದ ಬಿರುಸಿನ ಮಳೆಗೆ ಜನಜೀವನ ಅಸ್ತವ್ಯಸ್ತವಾಯಿತು.
ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಮಲೆನಾಡು, ಕರಾವಳಿಯ ವಾತಾವರಣ ಕಂಡು ಬಂತು. ಇಡೀ ದಿನ ಶೀತ ಹವೆ ಜನರನ್ನು ಕಾಡಿತು.ಬೆಳಗ್ಗೆ 9ರ ಸುಮಾರಿಗೆ ಸೂರ್ಯನ ಬೆಳಕು ಸ್ವಲ್ಪ ಕಂಡಿದ್ದು ಬಿಟ್ಟರೆ ದಿನಪೂರ್ತಿ ಮೋಡಗಳು ನೇಸರನಿಗೆ ಅಡ್ಡವಾಗಿ ನಿಂತಿದ್ದವು.
ಜನ ಜೀವನಕ್ಕೆ ಅಡಚಣೆ: ಶನಿವಾರ ಆರಂಭವಾದ ಜಿಟಿ ಜಿಟಿ ಮಳೆ ರಾತ್ರಿವರೆಗೂ ಮುಂದುವರಿಯಿತು. ಸ್ವಲ್ಪ ಹೊತ್ತು ಜೋರಾಗಿ ಮಳೆ ಬಂದರೆ, ಬಿಡುವಿನ ಸಂದರ್ಭದಲ್ಲಿ ಸೋನೆ ಮಳೆಯ ರೀತಿಯಲ್ಲಿ ಹನಿಯುತ್ತಲೇ ಇದ್ದು ಭಾನುವಾರ ವೀಕೆಂಡ್ ಸಂಭ್ರಮದ ಆಸೆಗೆ ತಣ್ಣಿರು ಎರಚಿದೆ.
ಹೊರಗೆ ಬಂದ ಛತ್ರಿ
ಜಾಕೆಟ್: ಮಳೆ ನಿಲ್ಲುವ ಲಕ್ಷಣ ಕಂಡು ಬರದೇ ಇದ್ದುದರಿಂದ ಜನರು ಛತ್ರಿ ಹಿಡಿದುಕೊಂಡು ಓಡಾಡಿದರು. ಚಳಿಯ ವಾತಾವರಣ ಇದ್ದುದರಿಂದ ಸ್ವೆಟರ್, ಜಾಕೆಟ್‌ಗಳನ್ನೂ ಧರಿಸಿದ್ದು ಕಂಡು ಬಂತು.
5 ಎಂಎಂ ಮಳೆ ದಾಖಲು
ಶನಿವಾರದ ಜಡಿ ಮಳೆ ತಾಲೂಕಿನಲ್ಲಿ ಐದು ಎಂ ಎಂ ಸುರಿದಿದೆ. ಭಕ್ತರಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಅತಿ ಹೆಚ್ಚು 22 ಎಂಎಂ ಮಳೆಯಾಗಿದ್ದು ಬಿಟ್ಟರೆ, ಕಸಬ ಹೋಬಳಿ 6 ಎಂಎಂ, ಕನಸವಾಡಿ 2 ಎಂಎಂ, ದೊಡ್ಡಬೆಳವಂಗಲ 4 ಎಂಎಂ, ತೂಬಗೆರೆ 8 ಎಂಎಂ ಹಾಗೂ ಸಾಸಲು ಹೊಬಳಿಯಲ್ಲಿ 11 ಎಂಎಂ ದಾಖಲಾಗಿದೆ ಎಂದು ಹರಿತಲೇಖನಿಗೆ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ರೂಪ ತಿಳಿಸಿದ್ದಾರೆ.

