ದೊಡ್ಡಬಳ್ಳಾಪುರ: ಕಳೆದ ಜೂನ್-ಜುಲೈ ತಿಂಗಳಲ್ಲಿ ನಡೆದಿದ್ದ ಎಸ್ಎಸ್ಎಲ್ಸಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದವರಿಗೆ ಪೂರಕ ಪರೀಕ್ಷೆ ತಾಲೂಕಿನ 2 ಕೇಂದ್ರಗಳಲ್ಲಿ ಸುಗಮವಾಗಿ ನಡೆದಿದೆ. ಮೊದಲ ದಿನದ ಗಣಿತ ವಿಷಯದ ಪರೀಕ್ಷೆಯಲ್ಲಿ ಯಾವುದೇ ಪರೀಕ್ಷಾ ಅಕ್ರಮಗಳ ಕುರಿತು ವರದಿಯಾಗಿಲ್ಲ.
2 ಪರೀಕ್ಷಾ ಕೇಂದ್ರಗಳಲ್ಲಿ 262 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಈ ಪೈಕಿ ಒಟ್ಟು 248 ವಿದ್ಯಾರ್ಥಿಗಳು ಹಾಜರಾಗಿದ್ದು, 14 ವಿದ್ಯಾರ್ಥಿಗಳು ಗೈರಾಗಿದ್ದಾರೆ. ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರುವುದನ್ನು ಪರಿಶೀಲಿಸಿ, ಪರೀಕ್ಷಾ ಕೇಂದ್ರವನ್ನು ಪ್ರವೇಶಿಸುವ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನರ್ಗಳ ಮೂಲಕ ವಿದ್ಯಾರ್ಥಿಗಳ ದೇಹದ ಉಷ್ಣತೆಯನ್ನು ಅಳೆದು, ಸ್ಯಾನಿಟೈಸರ್ ಹಾಕಿ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗುತ್ತಿತ್ತು. ಪರೀಕ್ಷಾ ಕೇಂದ್ರಗಳಲ್ಲಿಯೂ ಸಹ ಸಾಕಷ್ಟು ಆಸನಗಳ ವ್ಯವಸ್ಥೆ ಮಾಡಿ, ವಿದ್ಯಾರ್ಥಿಗಳು ಅಂತರ ಕಾಪಾಡಿಕೊಂಡು ಬರೆಯುವಂತೆ ವ್ಯವಸ್ಥೆ ಮಾಡಲಾಗಿತ್ತು.
ಕೊವಿಡ್-19 ಲಕ್ಷಣಗಳು ಬಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು 2 ಕೊಠಡಿಗಳನ್ನು ಹಾಗೂ ಅಗತ್ಯ ಕೊಠಡಿ ಮೇಲ್ವಿಚಾರಕರನ್ನು ಮೀಸಲಿರಿಸಲಾಗಿತ್ತು. ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಲಾಗಿ, ಮೊಬೈಲ್ಗಳನ್ನು ನಿರ್ಬಂಧಿಸಲಾಗಿತ್ತು.
ಪ್ರಥಮ ಪರೀಕ್ಷೆ ಪರಿಗಣನೆ: ಬೈಯಪ್ಪರೆಡ್ಡಿ
ಕಳೆದ ಜುಲೈನಲ್ಲಿ ನಡೆದ ಪರೀಕ್ಷೆಯಲ್ಲಿ ಕೊವಿಡ್-19 ಕಾರಣದಿಂದ ಅನಾರೋಗ್ಯದಿಂದ ಪರೀಕ್ಷೆ ಬರೆಯದೇ ಇದ್ದ ಒಬ್ಬ ವಿದ್ಯಾರ್ಥಿಯನ್ನು ಇಂದು ಪ್ರಥಮ ಪರೀಕ್ಷೆ ಎಂದು ಪರಿಗಣಿಸಿ, ಅವಕಾಶ ಕಲ್ಪಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬೈಯಪ್ಪರೆಡ್ಡಿ ತಿಳಿಸಿದ್ದಾರೆ.
( ಸಾಂದರ್ಭಿಕ ಚಿತ್ರ ಬಳಸಲಾಗಿದೆ )

