ದೊಡ್ಡಬಳ್ಳಾಪುರ: ಪೌರಕಾರ್ಮಿಕರಿಗೆ ಹಿಂದಿಗಿಂತ ಹೆಚ್ಚಿನ ಸೌಲಭ್ಯಗಳು ಈಗ ದೊರಕುತ್ತಿದ್ದು, ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಪೌರ ಕಾರ್ಮಿಕರು ನಿಷ್ಟೆಯಿಂದ ಕಾರ್ಯ ನಿರ್ವಹಿಸುವ ಮೂಲಕ ಜನರ ಪ್ರೀತಿ ವಿಶ್ವಾಸ ಗಳಿಸಬೇಕಿದೆ ಎಂದು ನಗರಸಭೆ ಪೌರಾಯುಕ್ತ ರಮೇಶ್ ಎಸ್.ಸುಣಗಾರ್ ಕರೆ ನೀಡಿದರು.
ಅವರು ನಗರದ ಪುರಭವನದಲ್ಲಿ ನಗರಸಭೆ ವತಿಯಿಂದ ನಡೆದ ಪೌರ ಕಾರ್ಮಿಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ದಶಕಗಳ ಹಿಂದೆ ಪೌರಕಾರ್ಮಿಕರಿಗೆ ವೇತನ ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಎದುರಾಗಿತ್ತು. ಇಂತಹ ಸಂದರ್ಭದಲ್ಲಿ 1993ರಲ್ಲಿ ಗದಗದಲ್ಲಿ ಪೌರ ಕಾರ್ಮಿಕರ ಸಂಘ ಸ್ಥಾಪಿಸಿದ ಜಿ.ಎಸ್.ಮಂಜುನಾಥ್ ಅವರ ಹೋರಾಟವನ್ನು ನಾವು ಇಂದು ಸ್ಮರಿಸಬೇಕಿದೆ. ಪೌರ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷರಾಗಿ, ರಾಜ್ಯ ಪ್ರತಿನಿಧಿಯಾಗಿ ಹಲವಾರು ಹೋರಾಟಗಳಲ್ಲಿ ತಾವು ಭಾಗವಹಿಸಿದ್ದನ್ನು ಸ್ಮರಿಸಿದ ಅವರು, ಈ ಹಿಂದೆ ಪೌರ ಕಾರ್ಮಿಕರಲ್ಲಿ ಸಂಘಟನೆಯ ಕೊರತೆಯಿತ್ತು. ಆದರೆ ಈಗ ಸಂಘಟನಾತ್ಮಕವಾಗಿ ತಮಗೆ ಬೇಕಾದ ಸೌಲಭ್ಯಗಳನ್ನು ಪಡೆದು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಅವಕಾಶಗಳಿವೆ ಈ ಹಿಂದೆ 80 ರೂ ವೇತನ ಪಡೆದಿದ್ದ ಕಾರ್ಮಿಕರು ಈಗ ಉತ್ತಮ ವೇತನ ಪಡೆಯುತ್ತಿದ್ದಾರೆ ಎಂದರು.
ಕೊವಿಡ್-19 ಸವಾಲನ್ನು ಎದುರಿಸಿ:
ಕೊವಿಡ್-19 ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್ಗಳಂತೆ ಪೌರ ಕಾರ್ಮಿಕರ ಪಾತ್ರ ಸಹ ಮಹತ್ವದ್ದಾಗಿದ್ದು, ಹಿಂದೆಂದಿಗಿಂತಲೂ ಹೆಚ್ಚಿನ ಜವಾಬ್ದಾರಿ ಹಾಗೂ ಕೆಲಸ ಹೆಚ್ಚು ಮಾಡುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಪೌರ ಕಾರ್ಮಿಕರು ಹಿರಿಯ ಅಧಿಕಾರಿಗಳನ್ನು ಮೆಚ್ಚಿಸಲು ಕಾರ್ಯ ನಿರ್ವಹಿಸದೇ ತಮ್ಮ ಆತ್ಮ ಸಾಕ್ಷಿಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಅದೇ ದೊಡ್ಡ ರಾಷ್ಟ್ರ ಪ್ರಶಸ್ತಿ ನೀಡಿದಂತೆ ಎಂದರು.
ನಗರಸಭೆ ಪರಿಸರ ಅಭಿಯಂತರ ಈರಣ್ಣ ಪ್ರಸ್ತಾವಿಕವಾಗಿ ಮಾತನಾಡಿ, ಪೌರ ಕಾರ್ಮಿಕರ ದಿನಾಚರಣೆಯನ್ನು 2007 ರಿಂದ ಪ್ರತಿ ವರ್ಷ ಆಚರಿಸಲಾಗುತ್ತಿದ್ದು, ವರ್ಷವಿಡೀ ದುಡಿಯುವ ಪೌರಕಾರ್ಮಿಕರಿಗೆ ವಿಶ್ರಾಂತಿ ನೀಡಲು ಹಾಗೂ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಲು ದಿನಾಚರಣೆ ಆಚರಿಸಲಾಗುತ್ತಿದೆ. ಪೌರಕಾರ್ಮಿಕರಿಗೆ ನಗರಸಭೆಯ ಶೇ.24.1 ಅನುದಾನದಲ್ಲಿ ವಿವಿಧ ವೈಯಕ್ತಿಕ ಸೌಲಭ್ಯಗಳು ವಸತಿ ಯೋಜನೆಯಲ್ಲಿ 7.5ಲಕ್ಷ ಸಹಾಯಧನ, ನಿವೇಶನ ರಹಿತರಿಗೆ ನಿವೇಶನ ನೀಡಲು ಯೋಜನೆಗಳಿವೆ ಎಂದು ತಿಳಿಸಿದರು.
ಪೌರ ಸೇವಾ ನೌಕರರ ಸೇವಾ ಸಂಘದ ನಗರ ಶಾಖೆ ಅಧ್ಯಕ್ಷ ತಿಪ್ಪಣ್ಣ ,ಉಪಾಧ್ಯಕ್ಷ ಎಂ.ರಾಜರತ್ನಂ, ಜಿಲ್ಲಾ ಖಜಾಂಚಿ ವೆಂಕಟೇಶ ಬಾಬು, ತಾಲೂಕು ಪದಾಧಿಕಾರಿಗಳಾದ ವೆಂಕಟಪ್ಪ,ಸೋಮಯ್ಯ, ನಾರಾಯಣ್,ನಗರಸಭೆ ವ್ಯವಸ್ಥಾಪಕ ಮುಮ್ತಾಜ್, ಅಭಿಯಂತರರಾದ ರಮೇಶ್, ಹರೀಶ್, ಲೆಕ್ಕಪತ್ರ ವಿಭಾಗದ ನಂದೀಶ್, ಶಿಂದೆ, ಹಿರಿಯ ಆರೋಗ್ಯ ನಿರೀಕ್ಷಕರಾದ ರೂಪಾ ಮತ್ತಿತರರು ಭಾಗವಹಿಸಿದ್ದರು.
ಸಮಾರಂಭಕ್ಕೂ ಮುನ್ನ ನಗರಸಭೆ ಮುಂಭಾಗದಿಂದ ಪುರಭವನದವರೆಗೆ ನಗರದ ಪ್ರಮುಖ ಬೀದಿಗಳಲ್ಲಿ ಪೌರಕಾರ್ಮಿಕರ ಮೆರವಣಿಗೆ ನಡೆಯಿತು.

