ದೊಡ್ಡಬಳ್ಳಾಪುರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಡೆಯುತ್ತಿರುವ ರಾಷ್ಟ್ರೀಯ ಪೋಷಣ್ ಅಭಿಯಾನ ಮಾಸಾಚರಣೆ ಅಂಗವಾಗಿ ಕಸಬಾ – 1 ವೃತ್ತದ ಅಂಗನವಾಡಿ ಕಾರ್ಯಕರ್ತೆಯರು, ನಗರದ ತಾಲೂಕು ಕಚೇರಿ ವೃತ್ತ, ಬಸ್ನಿಲ್ದಾಣದಲ್ಲಿ ಪೋಷಣ್ ಅಭಿಯಾನದ ಯೋಜನೆಯ ಕುರಿತು ಬೀದಿ ನಾಟಕ ಪ್ರದರ್ಶಿಸುವ ಮೂಲಕ ಜನ ಜಾಗೃತಿ ಮೂಡಿಸಿದರು.
ಬೀದಿ ನಾಟಕದಲ್ಲಿ ಮಾತೃ ವಂದನಾ ಸೇರಿದಂತೆ ಅಂಗನವಾಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಮಹಿಳೆಯರಿಗೆ ಸಿಗುವ ವಿವಿಧ ಸವಲತ್ತುಗಳ ಕುರಿತು ಮಾಹಿತಿ ನೀಡಿದರು.
ಬಾ-1 ವೃತ್ತದ ಮೇಲ್ವಿಚಾರಕಿ ಚೈತ್ರ ಆರ್ ರಾವ್ ಮಾತನಾಡಿ, ಕೇಂದ್ರಸರ್ಕಾರದ ಪೋಷಣ್ ಅಭಿಯಾನ ಮಾಸಾಚರಣೆ ಅಂಗವಾಗಿ ಪೋಷಣ್ ಮಾಸಾಚಾರಣೆ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಗರ್ಭಿಣಿ ಬಾಣಂತಿ ಮತ್ತು ಮಕ್ಕಳಿಗೆ ಪೋಷಣೆಯ ಅಗತ್ಯತೆ ಮತ್ತು ಇಲಾಖಾ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಬಾಣಂತಿಯರು ಯಾವುದೇ ಕಾರಣಕ್ಕೂ ಅಪೌಷ್ಟಿಕತೆಯಿಂದ ಹಾಗೂ ರಕ್ತಹೀನತೆಯಿಂದ ಬಳಲದಂತೆ ನಿಗಾವಹಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಮನೆಯಂಗಳದಲ್ಲಿ ಕೈ ತೋಟ ಬೆಳೆಸುವುದು ಮಕ್ಕಳಿಗೆ ಕೋಳಿ ಮೊಟ್ಟೆತಿನಿಸುವುದು ಮೊಳಕೆಕಾಳು ತಿನಿಸುವುದು ಮೊದಲಾಗಿ ಒಂದು ತಿಂಗಳ ಪೋಷಣ್ ಅಭಿಯಾನ ಮಾಸಾಚರಣೆಯಲ್ಲಿ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನಿತಾಲಕ್ಷ್ಮಿ, ಕಸಬಾ ಪೋಷಣ್ ಅಭಿಯಾನದ ಸಂಯೋಜಕರಾದ ಲೋಕೇಶ್ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

