ದೊಡ್ಡಬಳ್ಳಾಪುರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿ ಮಾಡಲು ಹೊರಟಿರುವ ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ, ವಿದ್ಯುತ್ ಖಾಸಗೀಕರಣ, ಕಾರ್ಮಿಕ ಕಾಯ್ದೆ ತಿದ್ದುಪಡಿ ಜಾರಿ ಮಾಡುವ ಕ್ರಮವನ್ನು ವಿರೋಧಿಸಿ ಹಾಗೂ ಯಾವುದೇ ಕಾರಣಕ್ಕೂ ಮಸೂದೆಗಳು ಜಾರಿಯಾಗಬಾರದು ಎಂದು ಆಗ್ರಹಿಸಿ, ರಾಜ್ಯದಲ್ಲಿ ರೈತ ಸಂಘಟನೆಗಳು ಕರೆ ನೀಡಿರುವ ಸೆ.28ರ ಬಂದ್ಗೆ ಬೆಂಬಲಿಸಿ ತಾಲೂಕಿನ ಕನ್ನಡಪರ ಸಂಘಟನೆಗಳು, ರೈತ, ಕಾರ್ಮಿಕ, ದಲಿತ ಸಂಘಟನೆಗಳ ಒಕ್ಕೂಟದಿಂದ ದೊಡ್ಡಬಳ್ಳಾಪುರ ಬಂದ್ ಆಚರಿಸಲು ಸಿದ್ದತೆಗಳನ್ನು ನಡೆಸಿದ್ದು, ಬಂದ್ ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.
ನಗರದ ಕನ್ನಡ ಜಾಗೃತ ಭವನದಲ್ಲಿ ನಡೆದ ರಾಜ್ಯ ರೈತ ಸಂಘ, ಕನ್ನಡಪರ ಸಂಘಟನೆಗಳು, ದಲಿತ ಪರ ಸಂಘಟನೆ, ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ಕನ್ನಡ ಪಕ್ಷದ ಅಧ್ಯಕ್ಷ ಸಂಜೀವ್ ನಾಯಕ್, ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ರಾಜ್ಯ ಕಾರ್ಯದರ್ಶಿ ರಾಜಘಟ್ಟ ರವಿ ಮಾತನಾಡಿ, ಸೆ.28ರಂದು ಸಂಪೂರ್ಣ ಬಂದ್ ಆಚರಿಸಲಾಗುತ್ತಿದ್ದು, ರೈತರು, ಕಾರ್ಮಿಕರು, ವರ್ತಕರು, ಉದ್ಯೋಗಸ್ಥರು, ನೇಕಾರರು ಮೊದಲಾಗಿ ಎಲ್ಲಾ ವರ್ಗದ ಜನರಿಗೆ ಸರ್ಕಾರದ ಜನ ವಿರೋಧಿ ನೀತಿಗಳ ಬಗ್ಗೆ ಅರಿವು ಮೂಡಿಸಿ, ಬಂದ್ ಯಶಸ್ವಿಗೊಳಿಸಲು ಮನವಿ ಮಾಡಲಾಗುವುದು. ಈ ಕುರಿತು ಆಟೋ ಪ್ರಚಾರ ಕೈಗೊಳ್ಳಲಾಗುವುದು ಎಂದರು.
ಕನ್ನಡ ಜಾಗೃತ ಪರಿಷತ್ತಿನ ಕಾರ್ಯದರ್ಶಿ ಟಿ.ಎನ್ಪ್ರಭುದೇವ್ ಮಾತನಾಡಿ, ರೈತ ವಿರೋಧಿ ಕಾಯ್ದೆಗಳ ಜಾರಿ ಮೂಲಕ ರೈತರು ಕೃಷಿಯಿಂದ ತಾವಾಗಿಯೇ ವಿಮುಖರಾಗುವಂತೆ ಮಾಡಲಾಗುತ್ತಿದೆ. ವಿದ್ಯುತ್ ಕಂಪನಿಗಳನ್ನು ಸಂಪೂರ್ಣವಾಗಿ ಖಾಸಗಿ ಕಂಪನಿಗಳಿಗೆ ವಹಿಸುವ ಮೂಲಕ ಕೃಷಿಗೆ ಉಚಿತ ವಿದ್ಯುತ್ ಪೂರೈಕೆ ನಿಲ್ಲಿಸಲು ಸರ್ಕಾರ ಸಿದ್ದತೆಗಳನ್ನು ನಡೆಸಿದೆ. ಎಪಿಎಂಸಿ ನ್ಯೂನತೆಗಳನ್ನು ಸರಿಪಡಿಸಿ, ರೈತರ ಹಿತ ಕಾಯುವ ಬದಲು, ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕಾರ್ಪೋರೇಟ್ ಕಂಪನಿಗಳಿಗೆ ಲಾಭ ಮಾಡಿಕೊಡುವ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ, ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದರು.
ದೊಡ್ಡಬಳ್ಳಾಪುರದಲ್ಲಿ ಸೆ.28ರಂದು ಬಂದ್..!
ಸೆ.28ರಂದು ಎಲ್ಲಾ ವರ್ಗದ ಜನರು ಸಂಪೂರ್ಣವಾಗಿ ಬಂದ್ನಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು. ಅಂದು ಬೆಳಿಗ್ಗೆ 7 ಗಂಟೆಯಿಂದ ಬೈಕ್ ರ್ಯಾಲಿ ಮಾಡುವ ಮೂಲಕ ಬಂದ್ ಆಚರಿಸಲು ಮನವಿ ಮಾಡಲಾಗುವುದು. ಆ ನಂತರ ನೆಲದಾಂಜನೇಯಸ್ವಾಮಿ ದೇವಾಲಯದ ಡಾ.ರಾಜ್ಕುಮಾರ್ ವೃತ್ತದ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ಆಗಮಿಸಿ, ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ, ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸತೀಶ್, ತಾಲೂಕು ಅಧ್ಯಕ್ಷ ಹನುಮೇಗೌಡ,ವಸಂತ್ ಕುಮಾರ್, ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ರಾಮಕೃಷ್ಣ, ಮುಖಂಡ ವಿಜಯ ಕುಮಾರ್, ಸಿಐಟಿಯು ಮುಖಂಡ ರೇಣುಕಾರಾಧ್ಯ,ನಗರಸಭೆ ಮಾಜಿ ಸದಸ್ಯ ಕೆಂಪರಾಜ್, ರಾಜ್ಯ ರೈತ ತಾಲೂಕು ಡಾ. ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸು.ನರಸಿಂಹಮೂರ್ತಿ, ಶಿವರಾಜ್ಕುಮಾರ್ ಸೇನಾ ಸಮಿತಿಯ ಅಧ್ಯಕ್ಷ ರಮೇಶ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ರಾಜು ಸಣ್ಣಕ್ಕಿ, ಕರವೇ ತಾಲೂಕು ಗೌ.ಅಧ್ಯಕ್ಷ ಪು.ಮಹೇಶ್, ಅಗ್ನಿ ವೆಂಕಟೇಶ್, ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಚರಣ್ ರಾಜ್ ಮೊದಲಾದವರು ಭಾಗವಹಿಸಿದ್ದರು.

