ದೊಡ್ಡಬಳ್ಳಾಪುರ: ಸರ್ಕಾರ ಅಂಗೀಕಾರ ಮಾಡಿರುವ ಭೂ ಸುಧಾರಣಾ, ಕಾರ್ಮಿಕ ಮತ್ತು ಎಪಿಎಂಸಿ ಕಾಯ್ದೆ ವಿರೋಧಿಸಿ ಇಂದು ರೈತಪರ ಸಂಘಟನೆಗಳು ಕರೆ ನೀಡಿದ್ದ ದೊಡ್ಡಬಳ್ಳಾಪುರ ಬಂದ್ ಕರೊನಾ ಸೋಂಕಿನ ಆತಂಕದ ನಡುವೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಂದ್ ಹಿನ್ನೆಲೆಯ ನಡುವೆಯೂ ನಗರದಲ್ಲಿ ಸಾರಿಗೆ ವ್ಯವಸ್ಥೆ, ಬ್ಯಾಂಕ್, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು, ಬಸ್ ಸಂಚರಿಸದಂತೆ ಪ್ರತಿಭಟನಾಕಾರರು ಚಾಲಕರಲ್ಲಿ ಮನವಿ ಮಾಡಿದರು ಸಹ ಇಲಾಖೆಯ ಆದೇಶದಂತೆ ಬಸ್ಗಳು ಕಾರ್ಯನಿರ್ವಹಿಸಿದವು.
ಬೆಳಗ್ಗೆ 7.30ಕ್ಕೆ ಬೈಕ್ ರ್ಯಾಲಿ ಮೂಲಕ ಆರಂಭ ಬಂದ್ ಪ್ರಕ್ರಿಯೆ ಉತ್ತಮವಾದ ಯಶಸ್ಸು ಪಡೆಯಿತು. ಬೈಕ್ ರ್ಯಾಲಿ ನಂತರ ಡಾ.ರಾಜ್ ಕುಮಾರ್ ಪ್ರತಿಮೆಗೆ ಹೂವಿನ ಹಾರ ಅರ್ಪಿಸಿ ಪ್ರತಿಭಟನಾ ಮೆರೆವಣಿಗೆ ನಡೆದಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಶಾಸಕ ಟಿ.ವೆಂಕಟರಮಣಯ್ಯ ಆದಿಯಾಗಿ ರಾಜ್ಯ ರೈತ ಸಂಘ, ದಲಿತ ಸಂಘಟನೆ ಹಾಗೂ ಕನ್ನಡಪರ ಸಂಘಟನೆಗಳು, ಜೆಡಿಎಸ್, ಕಾಂಗ್ರೆಸ್ ಹಾಗೂ ಸಿಪಿಐಎಂ ಮುಖಂಡರು ಭಾಗಿಯಾದರೂ.
ಈ ವೇಳೆ ಬ್ಯಾನರ್ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿದ್ದು ಸಂಘಟಕರು ಪ್ರತ್ಯೇಕವಾಗಿ ಯಾರು ಸಂಘಟನೆಗಳ ಬ್ಯಾನರ್ ಹಿಡಿಯದಂತೆ ಸೂಚನೆ ನೀಡಿದರು.
ನಂತರ ತಾಲೂಕು ಕಚೇರಿಯ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಮುಖಂಡರು ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಸದಸ್ಯರು ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಮತಚಲಾಯಿಸಿ ತಪ್ಪು ಮಾಡಿದೆವೆಂದು ಚಪ್ಪಲಿಯಲ್ಲಿ ಒಡೆದುಕೊಂಡರು.
ಉಳಿದಂತೆ ತಾಲೂಕಿನಲ್ಲಿ ತೀವ್ರಗೊಳ್ಳುತ್ತಿರುವ ಕರೊನಾ ಸೋಂಕಿನ ಆತಂಕದ ನಡುವೆಯೂ ಸಾಮಾಜಿಕ ಅಂತರ ಕಾಪಾಡದೆ ಓಗಿದ್ದು, ಕೆಲವರು ಮಾಸ್ಕ್ ಹಾಕದೆ ಇರುವುದು ಪ್ರತಿಭಟನೆಯಲ್ಲಿ ಭಾಗವಹಿಸಿದವರ ಆತಂಕಕ್ಕೆ ಕಾರಣವಾಗಿತ್ತು.
ಬಂದ್ ಹಿನ್ನಲೆ ಬೆಳಗ್ಗೆಯಿಂದ ಬಾಗಿಲು ಮುಚ್ಚಿದ್ದ ಅಂಗಡಿ ಮುಂಗಟ್ಟುಗಳು 12 ಗಂಟೆ ನಂತರ ತೆರೆಯಲಾರಂಭಿಸಿದರೆ, ಯಾವುದೇ ಆತಂಕಕ್ಕೆ ಅವಕಾಶ ನೀಡದೆ ಪ್ರತಿಭಟನೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಪೊಲೀಸ್ ಇಲಾಖೆಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಕಾರಣವಾಗಿದೆ.

